Home Mangalorean News Kannada News ಮೂರು ತಿಂಗಳಲ್ಲಿ  ಪಂಪ್‌ವೆಲ್ ಮತ್ತು ತೊಕ್ಕೊಟ್ಟು  ಮೇಲ್ಸೇತುವೆ  ಪೂರ್ಣಗೊಳಿಸಲು ನವಯುಗಕ್ಕೆ ಗಡ್ಕರಿ ಆದೇಶ

ಮೂರು ತಿಂಗಳಲ್ಲಿ  ಪಂಪ್‌ವೆಲ್ ಮತ್ತು ತೊಕ್ಕೊಟ್ಟು  ಮೇಲ್ಸೇತುವೆ  ಪೂರ್ಣಗೊಳಿಸಲು ನವಯುಗಕ್ಕೆ ಗಡ್ಕರಿ ಆದೇಶ

Spread the love

ಮೂರು ತಿಂಗಳಲ್ಲಿ  ಪಂಪ್‌ವೆಲ್ ಮತ್ತು ತೊಕ್ಕೊಟ್ಟು  ಮೇಲ್ಸೇತುವೆ  ಪೂರ್ಣಗೊಳಿಸಲು ನವಯುಗಕ್ಕೆ ಗಡ್ಕರಿ ಆದೇಶ

ಮಂಗಳೂರು: ತಲಪಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನಲ್ಲಿರುವ ಎರಡು ಮೇಲ್ಸೇತುವೆಗಳ ಕಾಮಗಾರಿಗಳನ್ನು ಮಳೆಗಾಲ ಮುಗಿದ ಬಳಿಕ (ಅಕ್ಟೋಬರ್ ನಂತರ) ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ನವಯುಗ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದೇಶ ನೀಡಿದ್ದಾರೆ.

ದೆಹಲಿಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗದ ಜತೆ ಸೋಮವಾರ ಸಾಯಂಕಾಲ ಸಭೆ ನಡೆಸಿದ ಸಚಿವರು, ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಪೂರ್ಣಗೊಳ್ಳಲೇಬೇಕು. ಇದು ನಿಮ್ಮ ಜವಾಬ್ದಾರಿ ಎಂದು ಸಭೆಯಲ್ಲಿ ಹಾಜರಿದ್ದ ನವಯುಗ ಸಂಸ್ಥೆಯ ವ್ಯವಸ್ಥಾಪಕರಿಗೆ ಸೂಚಿಸಿದರು.

2010ರಲ್ಲಿ ಆರಂಭವಾಗಿ 2013ರ ಮಾರ್ಚ್ ಒಳಗೆ ಮುಗಿಯಬೇಕಿದ್ದ 90 ಕಿ.ಮೀ. ಉದ್ದದ ಕುಂದಾಪುರ-ತಲಪಾಡಿ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಭೂಸ್ವಾಧೀನ ವಿಳಂಬ, ಯೋಜನೆ ಬದಲಾವಣೆ, ಗುತ್ತಿಗೆದಾರರಿಗೆ ಎದುರಾದ ಆರ್ಥಿಕ ಸಮಸ್ಯೆ ಇದಕ್ಕೆ ಕಾರಣವಾಗಿತ್ತು. 90 ಕಿ.ಮೀ. ಕಾಮಗಾರಿಯಲ್ಲಿ 82 ಕಿ.ಮೀ. ಪೂರ್ಣಗೊಂಡಿರುವ ಕುರಿತು 2017ರಲ್ಲಿ ಹೆದ್ದಾರಿ ಪ್ರಾಧಿಕಾರ ಪ್ರಮಾಣ ಪತ್ರ ನೀಡಿದ್ದು, 2017ರ ಫೆಬ್ರವರಿಯಿಂದ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನದಲ್ಲಿ ಟೋಲ್ ಸಂಗ್ರಹಕ್ಕೂ ಅವಕಾಶ ನೀಡಲಾಗಿದೆ. ಪಂಪ್‌ವೆಲ್, ತೊಕ್ಕೊಟ್ಟು ಫ್ಲೈಓವರ್‌ಗಳು ಹಾಗೂ ಮಹಾಕಾಳಿ ದೇವಸ್ಥಾನ ಬಳಿ ಪಾದಚಾರಿ ಅಂಡರ್‌ಪಾಸ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆದಿದೆ.

ಮೇಲ್ಸೇತುವೆ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಪ್ರತಿಪಕ್ಷ ಮುಖಂಡರು ಕೇಂದ್ರ ಸರ್ಕಾರ ಮತ್ತು ಸಂಸದ ನಳಿನ್ ವಿರುದ್ಧ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಆಗಸ್ಟ್ 2ರಂದು ನಳಿನ್ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ಸಭೆ ನಡೆಸಿ ಸೂಚನೆ ನೀಡಿದ್ದಾರೆ.

ಎಸ್.ಅಂಗಾರ, ಶಾಸಕರಾದ ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ, ಸಂಜೀವ ಮಟಂದೂರು ನಿಯೋಗದಲ್ಲಿದ್ದರು.

 


Spread the love

Exit mobile version