ಮೆಲ್ಕಾರ್ | ಕಾರು ಡಿವೈಡರ್ ಗೆ ಢಿಕ್ಕಿ: ಓರ್ವ ಮೃತ್ಯು; ನಾಲ್ವರಿಗೆ ಗಾಯ
ಬಂಟ್ವಾಳ: ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ರಾ.ಹೆ.75ರ ಮೆಲ್ಕಾರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಕಡಬ ತಾಲೂಕಿನ ಸವಣೂರು ನಿವಾಸಿ ಕಾರ್ತಿಕ್(23) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಅವರ ಗೆಳೆಯರಾಗಿರುವ ಸವಣೂರು ನಿವಾಸಿಗಳಾದ ಹರ್ಷಿತ್, ದೀಕ್ಷಿತ್, ಜಗದೀಶ್ ಮತ್ತು ನಿತಿನ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಐದು ಮಂದಿ ಮಂಗಳೂರಿನಿಂದ ಸವಣೂರಿನತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ನೂತನವಾಗಿ ನಿರ್ಮಾಣಗೊಂಡ ಮೆಲ್ಕಾರ್ ಎಲಿವೆಟೆಡ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಚಾಲಕ ಕಾರ್ತಿಕ್ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
