Home Mangalorean News Kannada News ಯಡಿಯೂರಪ್ಪ ನೆರೆ ಪ್ರದೇಶ ಭೇಟಿ ‘ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತೆ’…!

ಯಡಿಯೂರಪ್ಪ ನೆರೆ ಪ್ರದೇಶ ಭೇಟಿ ‘ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತೆ’…!

Spread the love

ಯಡಿಯೂರಪ್ಪ ನೆರೆ ಪ್ರದೇಶ ಭೇಟಿ ‘ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತೆ’…!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆಹಾನಿ ವೇಳೆ ಏಕಾಂಗಿಯಾಗಿ ಪ್ರವಾಸ ನಡೆಸಿದ್ದರಿಂದ ಯಾವುದೇ ಉಪಯೋಗವಾಗಲಿಲ್ಲ, ಕುಟ್ಟಿ ಕುಂದಾಪುರಕ್ಕೆ ಹೋಗಿ‌ ಬಂದಂತಾಗಿದೆ ಅಷ್ಟೇ… ಎಂದು ಜೆಡಿಎಸ್ ಸದಸ್ಯ ಬೋಜೇಗೌಡ ಟೀಕಿಸಿದ್ದಾರೆ.

ನೆರೆಹಾನಿ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಂಪುಟದಲ್ಲಿದ್ದರೂ ಪರಿಹಾರ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು‌ ಬಿಜೆಪಿ ನಾರಾಯಣಸ್ವಾಮಿ ಪರಿಷತ್ ಕಲಾಪದಲ್ಲಿ ಸಮರ್ಥಿಸಿಕೊಂಡರು. ಸಿಂಗಲ್ ಮ್ಯಾನ್ ಕ್ಯಾಬಿನೆಟ್ ಇದ್ದರೂ ಸಿಎಂ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ದರು. ವಯಸ್ಸನ್ನೂ ಲೆಕ್ಕಿಸದೇ ಏಕಾಂಗಿಯಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದರು.

ತಕ್ಷಣ ನಾರಾಯಣಸ್ವಾಮಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದ್ದರಲ್ಲಿ ಎರಡು ಮಾತಿಲ್ಲ, ಆದರೆ ಅವರ ಕಥೆ ಕುಟ್ಟಿ ಕುಂದಾಪುರಕ್ಕೆ ಹೋಗಿ ಬಂದಂತಾಗಿದೆ. ಮನೆಯಲ್ಲಿ ಅಪ್ಪ ಅಮ್ಮ ನಾಳೆ ಕುಟ್ಟಿಯನ್ನು ಕುಂದಾಪುರಕ್ಕೆ‌ ಕಳಿಸಬೇಕು ಎಂದು ರಾತ್ರಿ ಮಾತಾಡಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡಿದ್ದ ಕುಟ್ಟಿ ಬೆಳಗ್ಗೆ ಎದ್ದ ಕೂಡಲೇ ಕುಂದಾಪುರಕ್ಕೆ ಹೋಗುತ್ತಾನೆ, ಸಂಜೆ ವಾಪಸ್ ಬರುತ್ತಾನೆ, ಅಪ್ಪ ಅಮ್ಮ ಎಲ್ಲಿ ಹೋಗಿದ್ದೆ ಎಂದು ಕೇಳಿದರೆ ಕುಟ್ಟಿಯನ್ನು ಕುಂದಾಪುರಕ್ಕೆ ಕಳಿಸಬೇಕು ಅಂತಾ ಮಾತಾಡಿಕೊಳ್ತಾ ಇದ್ರಲ್ಲ ಅದನ್ನ ಕೇಳಿಸಿಕೊಂಡು ಕುಂದಾಪುರಕ್ಕೆ ಹೋಗಿ‌ಬಂದೆ ಎನ್ನುತ್ತಾನೆ. ಯಾಕೆ‌ ಹೋಗಬೇಕಿತ್ತು, ಏನು ಮಾಡಬೇಕಿತ್ತು ಎನ್ನುವುದು ಗೊತ್ತಿಲ್ಲದೇ ಸುಮ್ಮನೆ ಹೋಗಿ‌ಬಂದಿದ್ದ. ಅದೇ ರೀತಿ ಸಿಎಂ ನೆರೆ ಪ್ರವಾಸ ಮಾಡಿದ್ದಾರೆ. ಯಾಕೆ ಹೋದರು? ಏನು ಮಾಡಬೇಕಿತ್ತು? ಅದನ್ನು ಮಾತ್ರ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.

ಬೋಜೇಗೌಡ ಮಾತಿಗೆ ಕೆರಳಿದ ಡಿಸಿಎಂ ಲಕ್ಷ್ಮಣ ಸವದಿ, ಹಿಂದಿನ ಮುಖ್ಯಮಂತ್ರಿಗಳು ಯಾವ ತರಹ ಗ್ರಾಮ ವಾಸ್ತವ್ಯ ಮಾಡಿದ್ದರು ಏನು ಮಾಡಿದ್ದರು ನಮಗೂ ಗೊತ್ತಿದೆ ಎಂದರು.

ಹಿಂದೆ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗಲೂ ನೆರೆ ಬಂದಿತ್ತು, ಆಗ ಕುಮಾರಸ್ವಾಮಿ ಸಿಎಂ,
ಅವರನ್ನು ನಾನೇ ಪ್ರವಾಹ ಪೀಡಿತ ಸ್ಥಳಕ್ಕೆ ಕರೆದೊಯ್ದಿದ್ದೆ. ನಾನೇ ಟ್ರ್ಯಾಕ್ಟರ್ ನಲ್ಲಿ ಕೂರಿಸಿದ್ದೆ, ಅವರು ಎಲ್ಲಿ ಊಟ ಮಾಡಿದ್ದರು, ಎಲ್ಲಿ ಮಲಗಿದ್ದರು ಎಲ್ಲಿ ಏನ್ ಮಾಡಿದ್ದರು ನನಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಡಿಸಿಎಂ ಸವದಿ ಮಾತಿಗೆ ಕೆರಳಿ ಕೆಂಡವಾದ ಜೆಡಿಎಸ್ ಪರಿಷತ್ ಸದಸ್ಯರು, ಹೆಚ್ಡಿಕೆ ಎಲ್ಲಿ ಮಲಗಿದ್ದರು ಎನ್ನುವುದು ಒಳ್ಳೆಯ ಮಾತಲ್ಲ, ಏನ್ ಮಾಡಿದ್ದರು ಹೇಳಿ ನೋಡೋಣ ಎಂದು ಪಟ್ಟುಹಿಡಿದರು.

ಕುಮಾರಸ್ವಾಮಿ ಸಾಲಮನ್ನಾ ಮಾಡಿದರು ಎಂದರೆ ಸ್ಟಾರ್ ಹೋಟೆಲ್‌ ಬಿಟ್ಟು ಹೊರಗಡೆನೇ ಬಂದಿರಲಿಲ್ಲ‌ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ಯಾವ ಮುಖ್ಯಮಂತ್ರಿ ಏನು ಭರವಸೆ ನೀಡಿದ್ದರು, ನಂತರ ಏನು ಮಾಡಿದರು? ಎಂದು‌ ಚರ್ಚೆಗೆ ಸಮಯ ನಿಗದಿ ಮಾಡಿ ಚರ್ಚೆ ಮಾಡೋಣ ಎನ್ನುವ ಮನವಿಯನ್ನು ಸಭಾಪತಿಗಳಿಗೆ ಸಲ್ಲಿಸುವ ಮೂಲಕ ಚರ್ಚೆಗೆ ತೆರೆ ಎಳೆಯಲಾಯಿತು.

Source: Kannadaprabha


Spread the love

Exit mobile version