Home Mangalorean News Kannada News ಯಾಂತ್ರೀಕೃತ ಮೀನುಗಾರಿಕಾ ಬೋಟುಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಯಾಂತ್ರೀಕೃತ ಮೀನುಗಾರಿಕಾ ಬೋಟುಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

Spread the love

ಯಾಂತ್ರೀಕೃತ ಮೀನುಗಾರಿಕಾ ಬೋಟ್ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು: ಮೀನುಗಾರರ ಯಾಂತ್ರೀಕೃತ ಬೋಟ್ಗಳಿಗೆ ಡೆಲಿವರಿ ಪಾಯಿಂಟ್ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ತೆರಿಗೆ ರಹಿತ ಡೀಸೆಲ್ನ ಪ್ರಮಾಣವನ್ನು 400 ಲೀಟರುಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರ ನೇತೃತ್ವದ ಮಲ್ಪೆ ಮೀನುಗಾರರ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ವಿವರಿಸಿ, ಕೆಲವು ಬೇಡಿಕೆಗಳನ್ನು ಮುಂದಿಟ್ಟರು.

ಕಳೆದ ಎರಡು ವರ್ಷಗಳಿಂದ ಡೀಸೆಲ್ ಬೆಲೆ ಏರಿಕೆ, ಮತ್ಸ್ಯ ಕ್ಷಾಮ ಹಾಗೂ ಮೀನಿಗೆ ಯೋಗ್ಯ ಧಾರಣೆ ಸಿಗದೇ ಮೀನುಗಾರರು ಸುಸ್ತಿದಾರರಾಗಿದ್ದಾರೆ. ಪ್ರಸ್ತುತ ಮೀನುಗಾರರಿಂದ ಮಾರಾಟ ತೆರಿಗೆ ಪಡೆದುಕೊಂಡು ನಂತರ ಅವರ ಖಾತೆಗೆ ಈ ಮೊತ್ತವನ್ನು ಸರ್ಕಾರ ಜಮಾ ಮಾಡುತ್ತಿದೆ. ಈ ತೆರಿಗೆ ಹಣ ಕ್ರಮಬದ್ಧವಾಗಿ ಬಾರದೆ ಇರುವ ಕಾರಣ ತೊಂದರೆಯಾಗುತ್ತಿದೆ. ಆದ್ದರಿಂದ ಹಿಂದಿನಂತೆ ಡೆಲಿವರಿ ಪಾಯಿಂಟ್ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ಡೀಸೆಲ್ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಿಂದಿನ ಪದ್ಧತಿಯಂತೆ ಡೀಸೆಲ್ ಒದಗಿಸುವಂತೆ ಹಾಗೂ ಡೀಸೆಲ್ ಪ್ರಮಾಣ 400 ಲೀಟರುಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಪರಿಹಾರ: ಕೇಂದ್ರಕ್ಕೆ ಪತ್ರ
ಇದಲ್ಲದೆ ಭಾರತೀಯ ನೌಕಾ ಪಡೆಯ ಹಡಗೊಂದಕ್ಕೆ ಡಿಕ್ಕಿ ಹೊಡೆದು, ಮಲ್ಪೆಯ ಸುರ್ವಣ ತ್ರಿಭುಜ ಎಂಬ ಮೀನುಗಾರಿಕಾ ದೋಣಿ ಮುಳುಗಿದ್ದು, ಸಮುದ್ರದಲ್ಲಿ ಅದರ ಅವಶೇಷ ಪತ್ತೆಯಾಗಿದೆ. ಈ ದೋಣಿಯಲ್ಲಿದ್ದ ಮೀನುಗಾರರು ನಾಪತ್ತೆಯಾಗಿಲ್ಲ. ಅವರ ಕುಟುಂಬಗಳು ಸಂಕಷ್ಟದಲ್ಲಿದ್ದು, ಅವರಿಗೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವಂತೆ ಮೀನುಗಾರರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.


Spread the love

Exit mobile version