
ಯುಪಿಎ ಅವಧಿಯಲ್ಲಿ ಬೆಲೆ ಏರಿಕೆ ವಿರುದ್ದ ಪ್ರತಿಭಟಿಸುತ್ತಿದ್ದ ಅಣ್ಣಾ ಹಜಾರೆ, ರಾಮ್ ದೇವ್ ನಾಪತ್ತೆ- ಹರೀಶ್ ಕಿಣಿ
ಉಡುಪಿ: ತೈಲ ಬೆಲೆ ಏರಿಕೆ ವಿರುದ್ಧ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಅಂಬಾಗಿಲು ಆಶೀರ್ವಾದ್ ಬಳಿಯ ಪೆಟ್ರೋಲ್ ಬಂಕ್ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂತೆಕಟ್ಟೆ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಬಂದ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಬಂಕ್ ಎದುರು ಮೋದಿ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹರೀಶ್ ಕಿಣಿ, ಬಿಜೆಪಿಯ ಸಾಧನೆಯನ್ನು ನೋಡಲಾಗದೆ ಕಾಂಗ್ರೆಸ್ ಪಕ್ಷ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳುತ್ತಿದ್ದಾರೆ. ಇವರ ಸಾಧನೆ ಎಂದರೆ ಮೊನ್ನೆ ಮೊನ್ನೆ ಕೊರೋನಾ ವಿಪರೀತ ಏರಿಕೆ ಆದಾಗ ಬೆಡ್ ಗಾಗಿ, ಲಸಿಕೆಗಾಗಿ, ಪಡಿತರಕ್ಕಾಗಿ ಸಾಲು ನಿಲ್ಲಿಸಿರುವುದೇ ಬಿಜೆಪಿಗರ ದೊಡ್ಡ ಸಾಧನೆಯಾಗಿದೆ. ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾರ್ಗದರ್ಶನ ಮಾಡುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರ ಮತ್ತು ಪೂಜಾರಿಯವರ ಜನಪರ ಕಾಳಜಿ ಎದ್ದು ತೋರಿಸುತ್ತದೆ. ಇನ್ನಾದರೂ ಪೂಜಾರಿಯವರು ಕಲ್ಲಡ್ಕ ಕ್ಯಾಂಪಿನಿಂದ ಹೊರಬಂದು ಜನರ ಕಷ್ಟವನ್ನು ಅರಿಯಿರಿ ಎಂದರು.
ಕೇಂದ್ರದ ಮೋದಿ ಸರಕಾರ ಸದಾ ಜನರ ಅಭಿವೃದ್ಧಿಗೆ ಇರುವುದು ಎಂದು ಹೇಳಿಕೊಂಡು ತಿರುಗಾಡಿದ್ದು ಬಿಟ್ಟರೆ ಬಡವರ ಪರವಾಗಿ ಏನು ಮಾಡಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿ ಪಡಿಸಿದ ದೊಡ್ಡ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದ್ದೇ ಇವರುಗಳ ಸಾಧನೆಯಾಗಿದೆ. ಈ ಹಿಂದೆ ಯುಪಿಎ ಸರಕಾರ ಇದ್ದಾಗ ಸದಾ ಪ್ರತಿಭಟನೆಯಲ್ಲಿ ಸುದ್ದಿಯಾಗಿದ್ದ ಬಾಬಾ ರಾಮ್ ದೇವ್ ಮತ್ತು ಅಣ್ಣಾ ಹಜಾರೆ ಎಲ್ಲಿಯೂ ಕೂಡ ಕಾಣಿಸುತ್ತಿಲ್ಲ. ಅವರಿಬ್ಬರೂ ನಿತ್ಯಾನಂದ ಸ್ವಾಮಿಯ ಹೊಸ ದೇಶದಲ್ಲಿ ಹೋಗಿ ಸುಖವಾಗಿ ಬದುಕುತ್ತಿದ್ದಾರೆ ಅನ್ನುವ ಸಂಶಯ ಕಾಡುತ್ತಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ನಾಯಕರಾದ ರಮೇಶ್ ಕಾಂಚನ್, ವೆರೋನಿಕಾ ಕರ್ನೆಲಿಯೊ, ರೋಶನಿ ಒಲಿವರ್, ಡಾ ಸುನೀತಾ ಶೆಟ್ಟಿ, ಜನಾರ್ಧನ ಭಂಡಾರ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.
Why can’t u protest
Who is this artificial Cong I?
He is pathetic.