ರಸ್ತೆ ಬದಿ ತ್ಯಾಜ್ಯ ಎಸೆತ: ಎಫ್.ಐ.ಆರ್ ದಾಖಲು
ಮಂಗಳೂರು: ಸುಳ್ಯ ತಾಲೂಕು ಐವರ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಬೆಳ್ಳಾರೆ-ಸುಳ್ಯ ರಸ್ತೆಯ ಬೆಂಗಮಲೆ ಎಂಬಲ್ಲಿ ರಸ್ತೆಯ ಬದಿ ತ್ಯಾಜ್ಯ ಎಸೆದಿರುವ ಅಂಗಡಿ ಮಾಲಿಕರ ಮೇಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಬೇಂಗಮಲೆಯ 3 ಕಡೆಗಳಲ್ಲಿ ತ್ಯಾಜ್ಯದ ಚೀಲಗಳನ್ನು ಎಸೆದಿರುವುದು ಕಂಡು ಬಂದಿದ್ದು, ತೆರೆದು ಪರಿಶೀಲಿಸಿದಾಗ ಎಲ್ಲಾ ಮೂರೂ ತ್ಯಾಜ್ಯದ ಚೀಲಗಳಲ್ಲಿ ಸುಳ್ಯ ಗಾಂಧಿನಗರದ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ರ್ಸ್ ಜೆರ್ಸಿ ಶಾಪ್ ಎಂಬ ವಸ್ತ್ರ ಮಳಿಗೆಗೆ ಸೇರಿದ ತ್ಯಾಜ್ಯಗಳಿರುವುದು ಕಂಡುಬಂದಿರುತ್ತದೆ. ಚೀಲಗಳಲ್ಲಿ ವಸ್ತ್ರ ಮಳಿಗೆಗೆ ಸಂಬಂಧಿಸಿದ ಹಲವು ಬಿಲ್ಲುಗಳು, ಮಳಿಗೆಯ ಹೆಸರಿಗೆ ನೀಡಲಾದ ಜಾತ್ರೆಯ ಆಮಂತ್ರಣಗಳು ಹಾಗೂ ಮಳಿಗೆಯ ವಿದ್ಯುತ್ ಸಂಪರ್ಕದ ಮೆಸ್ಕಾಂ ಬಿಲ್ಲು ಲಭಿಸಿದ್ದು, ತ್ಯಾಜ್ಯಗಳು ಕೂಡ ವಸ್ತ್ರ ಮಳಿಗೆಯದ್ದೆಂಬುದಾಗಿ ಕಂಡುಬಂದಿತ್ತು.
ಈ ಬಗ್ಗೆ ಅಂಗಡಿ ಮಾಲಿಕರಿಗೆ ದೂರವಾಣಿ ಕರೆ ಮಾಡಿ ತ್ಯಾಜ್ಯದ ಚೀಲಗಳು ಸಿಕ್ಕಿರುವ ಬಗ್ಗೆ ತಿಳಿಸಿ ಗ್ರಾಮಪಂಚಾಯತ್ ಕಚೇರಿಗೆ ಬಂದು ನಿಗದಿತ ದಂಡವನ್ನು ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ ಅಂಗಡಿ ಮಾಲಿಕ ಅಕ್ಷಯ್ ರಜಪೂತ್ ಕಲ್ಲಡ್ಕ ಅವರು ತಾನು ತ್ಯಾಜ್ಯ ಎಸೆದಿರುವುದಿಲ್ಲವೆಂದು ವಾದಿಸಿ, ದಂಡದ ಮೊತ್ತವನ್ನು ಕಡಿಮೆ ಮಾಡುವಂತೆ ದಂಡ ಪಾವತಿಸಲು ನಿರಾಕರಿಸಿರುತ್ತಾರೆ.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಸೆಯುವುದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿರುವುದರಿಂದಲೂ, ತ್ಯಾಜ್ಯ ಎಸೆದ ವ್ಯಕ್ತಿಗಳಿಗೆ ಸೂಕ್ತ ದಂಡ ಅಥವಾ ಶಿಕ್ಷೆಯನ್ನು ವಿಧಿಸದೇ ಇದ್ದಲ್ಲಿ ಸಾರ್ವಜನಿಕ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ದುಸ್ತರವಾಗುವುದರಿಂದ, ವಿಚಾರವನ್ನು ಐವರ್ನಾಡು ಗ್ರಾಮಪಂಚಾಯತ್ ಆಡಳಿತ ಮಂಡಳಿಯು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಗ್ರಾಮಪಂಚಾಯತ್ ಭೇಟಿಯ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದು, ಈ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರಕರಣ ದಾಖಲಿಸಲು ದೂರು ಸಲ್ಲಿಸುವಂತೆ ಸೂಚಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಐವರ್ನಾಡು ಪಿ.ಡಿ.ಒ ಶ್ಯಾಮಪ್ರಸಾದ್ ಅವರು ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
