Home Mangalorean News Kannada News ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ.ಸಲೀಂ ನೇಮಕ

ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ.ಸಲೀಂ ನೇಮಕ

Spread the love

ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ.ಸಲೀಂ ನೇಮಕ

ಬೆಂಗಳೂರು: ಕನ್ನಡಿಗ, ಹಿರಿಯ ಐಪಿಎಸ್‌ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ಕರ್ನಾಟಕದ ಪೊಲೀಸ್‌ ಮಹಾನಿರ್ದೇಶಕರಾಗಿ ( ಡಿಜಿ ಹಾಗು ಐಜಿಪಿ) ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮೇ 21ರಂದು ಕರ್ನಾಟಕದ ಪೊಲೀಸ್‌ ಮಹಾನಿರ್ದೇಶಕರಾಗಿರುವ ಡಾ.ಅಲೋಕ್‌ಮೋಹನ್‌ ಅವರು ಸೇವೆಯಿಂದ ನಿವೃತ್ತರಾಗಲಿದ್ದು, ಈ ಸ್ಥಾನಕ್ಕೆ ಕನ್ನಡಿಗ ಐಪಿಎಸ್‌ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ನೇಮಕ ಮಾಡಲಾಗಿದೆ.

1966ರ ಜೂನ್ 25ರಂದು ಬೆಂಗಳೂರು ಸಮೀಪದ ಪಟ್ಟಣದಲ್ಲಿ ಜನಿಸಿದ ಡಾ.ಎಂ.ಎ.ಸಲೀಂ ಅವರು, 1989ರಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1993ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಪೊಲೀಸ್ ನಿರ್ವಹಣೆ ಕುರಿತು ಸ್ನಾತಕೋತ್ತರ ಪದವಿ ಪಡೆದ ಅವರು 2010ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಟ್ರಾಫಿಕ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನುಪಡೆದುಕೊಂಡಿದ್ದಾರೆ.

ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿಯಾಗಿ 1993ರಲ್ಲಿ ಅವರು ನೇಮಕಗೊಂಡಿದ್ದರು.

ಸದ್ಯ ಸಿಐಡಿ ಡಿಜಿಪಿಯಾಗಿರುವ ಡಾ.ಎಂ.ಎ.ಸಲೀಂ ಅವರು, ಈ ಹಿಂದೆ ಗುಲ್ಬರ್ಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಸಾಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ನಗರದಲ್ಲಿ ಅಪರಾಧ ವಿಭಾಗದಲ್ಲಿ ಸಹಾಯಕ ಪೊಲೀಸ್ ಮಹಾನಿರ್ದೇಶಕರಾಗಿ, ಮೈಸೂರು ನಗರದಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಸಂಚಾರ ವಿಷಯದಲ್ಲಿಯೇ ಪಿಎಚ್‌ಡಿ ಮಾಡಿರುವ ಡಾ.ಎಂ.ಎ.ಸಲೀಂ ಅವರು, ಮೈಸೂರು ನಗರ ಪೊಲೀಸ್‌ ಆಯುಕ್ತರಾಗಿದ್ದಾಗ ಕೈಗೊಂಡ ಸಂಚಾರ ಸುಧಾರಣೆಗಳು ಗಮನ ಸೆಳೆದಿವೆ.


Spread the love

Exit mobile version