ರಾಣಿ ಅಬ್ಬಕ್ಕ ಗೌರವಾರ್ಥ ಉಳ್ಳಾಲವನ್ನು ಹೆರಿಟೇಜ್ ವಿಲೇಜ್ ಆಗಿ ಗುರುತಿಸಲು ಸಂಸದ ಕ್ಯಾ. ಚೌಟ ಆಗ್ರಹ
ಮಂಗಳೂರು: ಸಾಧ್ಯತೆಗಳ ಸಾಗರವಾಗಿರುವ ದಕ್ಷಿಣ ಕನ್ನಡವು ದಶಕಗಳಿಂದ ಹಾಗೆಯೇ ಉಳಿದಿಕೊಂಡಿರುವ ಹಿನ್ನಲೆಯಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಜನ ಕೇಂದ್ರೀಕೃತ ಹಾಗೂ ಪರಂಪರೆ ಆಧಾರಿತ ವಿಷನ್‌ರೂಪಿಸಬೇಕೆಂದು ಸಂಸದ ಕ್ಯಾ. ಬ್ರಿಜೇಶ್‌ಚೌಟ ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, ಕರಾವಳಿ ಪ್ರವಾಸೋದ್ಯಮವು ಜನರ ಸಂಖ್ಯೆಯನ್ನು ಮೀರಿ ನಮ್ಮ ಇತಿಹಾಸ-ಪರಂಪರೆ, ಸ್ಥಳೀಯ ಜೀವನೋಪಾಯ ಮತ್ತು ಸುಸ್ಥಿರ ಆರ್ಥಿಕ ಮಾದರಿಗಳಲ್ಲಿ ನೆಲೆಗೊಳ್ಳಬೇಕು. ಈ ಹಿನ್ನಲೆಯಲ್ಲಿ ಉಳ್ಳಾಲವನ್ನು ಕೇವಲ ಒಂದು ಪ್ರವಾಸಿ ತಾಣವಾಗಿ ಮಾತ್ರ ಗುರುತಿಸದೆ ಅದನ್ನು ಒಂದು ಹೆರಿಟೇಜ್ ವಿಲೇಜ್ ಆಗಿಯೂ ಘೋಷಿಸಬೇಕು. ಪೋರ್ಚ್‌ಗೀಸ್ ವಿರುದ್ಧ ಧೀರವಾಗಿ ಹೋರಾಡಿದ್ದ ವೀರವನಿತೆ ರಾಣಿ ಅಬ್ಬಕ್ಕನ ಆಡಳಿತ ಕೇಂದ್ರ ಉಳ್ಳಾಲ. ಇದು ಭಾರತೀಯ ನಾರೀಶಕ್ತಿಯ ಮೊದಲ ಪ್ರತಿರೋಧದ ಗುರುತು. ಇಂಥಹ ಪಾರಂಪರಿಕ ಇತಿಹಾಸದ ಶ್ರೀಮಂತಿಕೆ ಹೊಂದಿರುವ ಉಳ್ಳಾಲದಲ್ಲಿ ಅರಮನೆ, ಸೋಮನಾಥೇಶ್ವರ ದೇವಾಲಯ, ಕೃಷಿ, ಮ್ಯೂಸಿಯಂ ಒಳಗೊಂಡಂತೆ ಒಂದು ಕೇಂದ್ರೀಕೃತ ಪ್ರವಾಸೋದ್ಯಮ ವಲಯ ನಿರ್ಮಾಣ ಮಾಡಬಹುದು ಎಂದು ಸಂಸದ ಕ್ಯಾ. ಚೌಟ ಹೇಳಿದ್ದಾರೆ.
ಸಸಿಹಿತ್ಲು ಬೀಚ್ ಅನ್ನು ನದಿ ಮತ್ತು ಸಮುದ್ರ ಸಂಗಮಿಸುವ ಅಪರೂಪದ ತಾಣವೆಂದು ಬಣ್ಣಿಸಿದ ಕ್ಯಾ. ಚೌಟ ಅವರು, ಈ ಬೀಚಿಂಗ್ ತಾಣವನ್ನು ಸರ್ಫಿಂಗ್ ಮತ್ತು ಪ್ಯಾಡ್ಲಿಂಗ್‌ನಂತಹ ಸಾಹಸ ಕ್ರೀಡೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಅಗತ್ಯವಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ‘ಇಂಡಿಯಾ ಪ್ಯಾಡಲ್ ಫೆಸ್ಟಿವಲ್’ ಅನ್ನು ಯಶಸ್ವಿಯಾಗಿ ಆಯೋಜಿಸಿರುವ ಸಸಿಹಿತ್ಲು ಬೀಚ್, ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಿ ಸುರಕ್ಷತಾ ಪ್ರಮಾಣೀಕರಣ ಪಡೆದರೆ ಇಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲು ವಿಪುಲ ಅವಕಾಶಗಳಿವೆ ಎಂದು ಸಂಸದರು ಸಲಹೆ ನೀಡಿದ್ದಾರೆ.
ಇದೇ ವೇಳೆ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಮೀಸಲಾದ ಕ್ರಿಯಾ ಯೋಜನೆಯನ್ನು ರೂಪಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಕ್ಯಾ.ಚೌಟ ಅವರು ಈ ಪ್ರದೇಶದ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ಸ್ಪಷ್ಟವಾದ ಮಾರ್ಗಸೂಚಿ ಅತ್ಯಗತ್ಯ ಮತ್ತು ಈ ಯೋಜನೆಗಳ ಸಮಯೋಚಿತ ಅನುಷ್ಠಾನಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.
