Home Mangalorean News Kannada News ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 10ನೇ ಭಾನುವಾರ ಶ್ರಮದಾನ

ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 10ನೇ ಭಾನುವಾರ ಶ್ರಮದಾನ

Spread the love

ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 10ನೇ ಭಾನುವಾರ ಶ್ರಮದಾನ

ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿರುವ ಶ್ರಮದಾನಗಳ 10ನೇ ಕಾರ್ಯಕ್ರಮವನ್ನು ನಗರದ ಸರ್ವೀಸ್ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ 10-2-2019 ರಂದು ಬೆಳಿಗ್ಗೆ 7-30 ರಿಂದ 10-30 ರವರೆಗೆ ಹಮ್ಮಿಕೊಳ್ಳಲಾಯಿತು.

ಭಾರತೀಯ ಕೆಥೊಲಿಕ್ ಯುವ ಸಂಚಾಲನ್ ಕಾರ್ಯದರ್ಶಿ ರೋಶನ್ ರೊಕೊ ಹಾಗೂ ಪೈಂಟ್ ಡೀಲರ್ಸ್ ಅಸೋಸಿಯೇಶನ್ ಅಧಕ್ಷ ಗುರುದತ್ತ ಶೆಣೈ 10ನೇ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೋಹನ್ ಕೊಟ್ಟಾರಿ, ಮಹೇಶ್ ಕಾಮತ್, ರಾಜೇಂದ್ರ ಶೆಟ್ಟಿ, ರಮೇಶ್ ಶೆಣೈ, ಶ್ರೀಧರ ಕಾಮತ್, ಇಮ್ತಿಯಾಜ್ ಶೇಖ್, ಡೆಂಜಿಲ್, ಸಪ್ನಾ ನೀರುಮಾರ್ಗ ಸೇರಿದಂತೆ ಅನೇಕ ಕಾರ್ಯಕರ್ತರು ಅಭಿಯಾನದಲ್ಲಿ ಭಾಗಿಯಾದರು

ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ್ “ಸ್ವಚ್ಛತಾ ಅಭಿಯಾನ ಕೇವಲ ಕಸಗುಡಿಸುವ ಕಾರ್ಯಕ್ರಮವಾಗಿ ಉಳಿಯದೆ ಇದೊಂದು ಸಮಾನ ಮನಸ್ಸುಗಳನ್ನು ಜೋಡಿಸುವ ಹಾಗೂ ಸಮಾಜಮುಖಿಯನ್ನಾಗಿಸುವ ಜನಾಂದೋಲನವಾಗಿ ಮಾರ್ಪಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಉತ್ತಮ ಸಮಾಜ ನಿರ್ಮಾಣವಾಗಬೇಕಿದ್ದರೆ ಉತ್ತಮ ಮನಸ್ಸುಗಳು ಒಂದಾಗಬೇಕು; ಅಂತಹ ಒಂದು ವೇದಿಕೆಯನ್ನು ರೂಪಿಸಿ, ಸಮಾನಾಸಕ್ತರನ್ನು ಒಗ್ಗೂಡಿಸಿದ ರಾಮಕೃಷ್ಣ ಮಿಷನ್ ಕಾರ್ಯ ಅಭಿನಂದನೀಯ” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಶ್ರಮದಾನದಲ್ಲಿ ಪಾಲ್ಗೊಂಡ ಶ್ರೀ ಹನುಮಂತರಾಯಪ್ಪ, ಉಪ ಪೆÇೀಲಿಸ್ ಆಯುಕ್ತರು, ಮಂಗಳೂರು ನಗರ ಇವರು ಮಾತನಾಡಿ “ಸ್ವಚ್ಛ ಮಂಗಳೂರು ಅಭಿಯಾನದಲ್ಲ್ಲಿ ಜಾತಿ-ಮತ-ಪಂಥಗಳ ಬೇಧ ಭಾವವಿಲ್ಲದೇ ಪ್ರತಿಯೊಬ್ಬರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಅತ್ಯಂತ ವಿಶಿಷ್ಠವಾಗಿದೆ. ಸ್ವಚ್ಛತೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಹಾಗೂ ಸ್ವಚ್ಛತೆಯನ್ನು ಜನರು ಸ್ವಯಂ ಸ್ಫೂರ್ತಿಯಿಂದ ಮೈಗೂಡಿಸಿಕೊಳ್ಳುವಂತಾಗಬೇಕು. ಆಗ ಮಾತ್ರ ಸ್ವಚ್ಛ ಭಾರತದ ಕನಸು ನನಸಾಗುತ್ತದೆ” ಎಂದು ತಿಳಿಸಿ ಶುಭಹಾರೈಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕರ್ತರು ಸರ್ವಿಸ್ ಬಸ್ ನಿಲ್ದಾಣವನ್ನು ಸ್ವಚ್ಛ ಮಾಡಿದರು. ಭಾರತೀಯ ಕೆಥೋಲಿಕ್ ಯುವ ಸಂಚಲನದ ಸುಮಾರು ಐವತ್ತು ಜನ ಸದಸ್ಯರು ಅಧ್ಯಕ್ಷರಾದ ಆಡ್ಲಿನ್ ಜೋತ್ನಾ ಮಾರ್ಗದರ್ಶನದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳಗಳನ್ನು ಶುಚಿಗೊಳಿಸಿದರು. ನಿವೇದಿತಾ ಬಳಗ ಹಾಗೂ ಶಾರದಾ ಮಹಿಳಾ ವೃಂದದ ಸದಸ್ಯೆಯರು ಬಸ್ ನಿಲ್ದಾಣದ ಹೊರಾವರಣವನ್ನು ಗುಡಿಸಿ ಸ್ವಚ್ಛಗೊಳಿಸಿದರು. ಪೈಂಟ್ ಡೀಲರ್ಸ್ ಅಸೋಶಿಯೇಶನ್ ಸದಸ್ಯರು ಹತ್ತಿರದಲ್ಲಿದ್ದ ಮಾರುಕಟ್ಟೆಯ ಸುತ್ತಮುತ್ತ ಶ್ರಮದಾನ ಮಾಡಿದರು. ರಾವ್ ಅಂಡ್ ರಾವ್ ವೃತ್ತದೆಡೆ ತೆರಳುವ ಮಾರ್ಗದಲ್ಲೊಂದು ಕಸದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ನಂತರ ದಿನೇಶ್ ಕರ್ಕೆರಾ ಹಾಗೂ ಸ್ವಯಂ ಸೇವಕರು ಬಸ್ ನಿಲ್ದಾಣದ ಮೂಲೆಯೊಂದರಲ್ಲಿ ಬಿದ್ದಿದ್ದ ಕಟ್ಟಡ ತ್ಯಾಜ್ಯವನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು. ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಸುತ್ತಮುತ್ತಲಿನ ಮೀನು ವ್ಯಾಪಾರ ಮಳಿಗೆಗಳಿಗೆ ತೆರಳಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿ ಜಾಗೃತಿ ಮಾಡಲಾಯಿತು.

ವಿಶೇಷ ಕಾರ್ಯಗಳು: ಹತ್ತನೇ ಶ್ರಮದಾನದ ಪ್ರಯುಕ್ತ ಸ್ವಚ್ಛತೆಯೊಂದಿಗೆ ಬೇರೆ ಬೇರೆ ಕಾರ್ಯಗಳನ್ನು ಮಾಡಲಾಯಿತು. ಮೊದಲಿಗೆ ಬಸ್ ನಿಲ್ದಾಣದ ಪ್ರಯಾಣಿಕರು ಕುಳಿತುಕೊಳ್ಳುವ ಜಾಗೆಯಲ್ಲಿದ್ದ ಕಂಬಗಳನ್ನು ಸ್ವಚ್ಛ ಮಾಡಿ ಸುಮಾರು ಹನ್ನೆರಡು ಜನ ನುರಿತ ಪೈಂಟರ್ಸ್ ಜೊತೆಗೂಡಿ ಕಾರ್ಯಕರ್ತರು ಸ್ವಚ್ಛಗೊಳಿಸಿ ಬಣ್ಣ ಬಳಿದು ಅಂದಗೊಳಿಸಿದರು. ಸುಮಾರು ಐವತ್ತು ಲೀಟರ್ ಬಣ್ಣವನ್ನು ಈ ಕಾರ್ಯಕ್ಕೆ ವಿನಿಯೋಗಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೆಲವೆಡೆ ಸರಿಯಾಗಿ ಕುಳಿತುಕೊಳ್ಳಲು ವ್ಯವಸ್ಥೆಯಿರಲಿಲ್ಲ. ಕೆಲವು ಆಸನಗಳು ಮುರಿದು ಬಿದ್ದು ಜನರಿಗೆ ಅನಾನುಕೂಲವಾಗುತ್ತಿತ್ತು. ಅದನ್ನು ಗಮನಿಸಿದ ಕಾರ್ಯಕರ್ತರು ಉದಯ ಕೆ ಪಿ, ಪ್ರೀತಮ್ ಮುಗಿಲ ಜೊತೆಗೂಡಿ ವಿಶಿಷ್ಠ ವಿನ್ಯಾಸದ ಆಕರ್ಷಕ ಕುಳಿತುಕೊಳ್ಳುವ ಆಸನಗಳನ್ನು ಅಲ್ಲಿ ಅಳವಡಿಸಿದರು. ಹಾಗೂ ಹಳೆಯ ಆಸನಗಳಿಗೆ ಪೈಂಟ್ ಡೀಲರ್ಸ್ ಅಸೋಸಿಯೇಶನ್ ಸದಸ್ಯರು ಬಣ್ಣ ಹಚ್ಚಿ ಸುಂದರವಾಗಿಸಿದರು. ಇನ್ನೊಂದೆಡೆ ಸೌರಜ್ ಮಂಗಳೂರು ಹಾಗೂ ಕಾರ್ಯಕರ್ತರು ಬಸ್ ನಿಲ್ದಾಣದ ಪಕ್ಕದಲ್ಲಿದ್ದ ರಸ್ತೆಯಲ್ಲಿ ಮೂತ್ರ ಮಾಡಿ ಗಲೀಜು ಮಾಡಿದ ಸ್ಥಳವನ್ನು ಇಂದು ಟ್ಯಾಂಕರ್ನಿಂದ ನೀರು ತರಿಸಿಕೊಂಡು ನೀರು ಹಾಕಿ ಶುಚಿಗೊಳಿಸಿದರು. ಹಿಂದೂ ವಾರಿಯರ್ಸ್ ತಂಡ, ಭಾರತೀಯ ಕೆಥೋಲಿಕ್ ಯುವ ಸಂಚಲನ, ಪೈಂಟ್ ಡೀಲರ್ಸ್ ಅಸೋಶಿಯೇಶನ್, ನಿವೇದಿತಾ ಬಳಗ, ಶಾರದಾ ಮಹಿಳಾ ವೃಂದ ಹಾಗೂ ಇತರ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸ್ವಚ್ಛ ಪುತ್ತೂರು: ರಾಮಕೃಷ್ಣ ಮಿಷನ್ ಸ್ವಚ್ಛ ಪುತ್ತೂರು ಕಾರ್ಯಕರ್ತರಿಂದ ಮೊಟ್ಟೆತಡ್ಕದ ಅಗ್ನಿಶಾಮಕ ಠಾಣೆಯ ಮುಂಭಾಗ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಕೆಮ್ಮಿಂಜೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಉಮೇಶ್ ಡಿ ಕೆ, ಹಾಗೂ ಶ್ರೀ ಸುಬ್ರಮಣ್ಯ ಶಾಸ್ತ್ರಿ ಭಾಗವಹಿಸಿ ಸ್ವಚ್ಛತೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಗಣೇಶ್ ಆಚಾರ್ಯ, ಚಂದ್ರಶೇಖರ್ ಭಟ್, ಸಂದೀಪ ಲೋಬೊ, ಎಂ ಜಿ ನಾಯಕ್, ಸೀತಾರಾಮಚಾರ್ಯ ಇನ್ನಿತರರು ಶ್ರಮದಾನಗೈದರು. ಸ್ವಚ್ಛ ಪುತ್ತೂರು ತಂಡದ ಮುಖ್ಯ ಸಂಯೊಜಕ ಕೃಷ್ಣ ಜಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಈ ಸ್ವಚ್ಛತಾ ಅಭಿಯಾನಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.


Spread the love

Exit mobile version