Home Mangalorean News Kannada News ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ಹಂತದ 16ನೇ ಸ್ವಚ್ಛ ಮಂಗಳೂರು ಶ್ರಮದಾನ

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ಹಂತದ 16ನೇ ಸ್ವಚ್ಛ ಮಂಗಳೂರು ಶ್ರಮದಾನ

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ಹಂತದ 16ನೇ ಸ್ವಚ್ಛ ಮಂಗಳೂರು ಶ್ರಮದಾನ

ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಜರುಗುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ಹಂತದ 16ನೇ ಭಾನುವಾರದ ಶ್ರಮದಾನವನ್ನು ಮಣ್ಣಗುಡ್ಡೆ ಹಾಗೂ ಉರ್ವಾ ಮಾರ್ಕೆಟ್ ಮಧ್ಯದಲ್ಲಿರುವ ಪೆಂಟ್ಲಾಂ ಪೇಟ ಪ್ರದೇಶದಲ್ಲಿ ದಿನಾಂಕ 24-3-2019ರಂದು ಬೆಳಿಗ್ಗೆ 7-30 ರಿಂದ 10-30 ರವರೆಗೆ ಕೈಗೊಳ್ಳಲಾಯಿತು.

ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಮಂಗಳೂರು ವಿಭಾಗದ ಅಧ್ಯಕ್ಷರಾದ ಡಾ. ಸಚ್ಚಿದಾನಂದ ರೈ ಹಾಗೂ ಡಾ. ಪ್ರಶಾಂತ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ ಸಚ್ಚಿದಾನಂದ ರೈ “ನಮ್ಮ ಜೀವನದಲ್ಲಿ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ಮನುಷ್ಯ ಸ್ವಚ್ಛತೆಗೆ ಅದ್ಯತೆ ನೀಡುತಾನೋ ಆತ ಅತ್ಯಂತ ಆರೋಗ್ಯದಿಂದಿದ್ದು, ನೆಮ್ಮದಿಯ ಜೀವನವನ್ನು ನಡೆಸುತ್ತಾನೆ. ಇಂತಹ ಜೀವನ ಪಾಠವನ್ನು ಜನರಿಗೆ ಮನದಟ್ಟು ಮಾಡಿಕೊಡುತ್ತಿರುವ ಈ ಅಭಿಯಾನದ ಕಾರ್ಯ ಶ್ಲಾಘನೀಯವಾದುದು. ಈ ಜಾಗೃತಿ ಕಾರ್ಯ ನಿರಂತರವಾಗಿ ನಡೆಯಲಿ, ಮುಂಬರುವ ಪೀಳಿಗೆಗೆ ಉತ್ತಮ ಹಾಗೂ ಸುಸಂಸ್ಕೃತ ಸಮಾಜವನ್ನು ನಿರ್ಮಿಸಿಕೊಡುವ ಹೊಣೆ ನಮ್ಮೆಲ್ಲರ ಮೇಲಿದೆ” ಎಂದು ತಿಳಿಸಿ ಶುಭ ಹಾರೈಸಿದರು. ಮತ್ತೊಬ್ಬ ಅತಿಥಿ ಡಾ. ಪ್ರಶಾಂತ ಮಾತನಾಡಿ “ಪರಿಸರ ಸ್ವಚ್ಚತೆಯ ಜೊತೆಗೆ ಮನಸ್ಸುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಬಹಳ ಮುಖ್ಯವಾಗಿ ಆಗಬೇಕಿದೆ. ಮನುಷ್ಯ ಸ್ವಾರ್ಥರಹಿತವಾಗಿ ಯೋಚಿಸಿದಾಗ ಸಮಾಜದ ಅನೇಕ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರವಾಗುತ್ತವೆ. ಸಮಾಜದ ಮೇಲ್ವರ್ಗದವರು ಸಮಾಜದ ಜೊತೆ ಒಂದಾಗಿ ಬದುಕಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಈ ಸ್ವಚ್ಛತಾ ಅಭಿಯಾನ ಅಂತಹ ಎಲ್ಲ ವಿಚಾರಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಡುತ್ತಿರುವುದು ಸಂತೋಷದ ಸಂಗತಿ” ಎಂದು ತಿಳಿಸಿದರು.

ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪನ್ ಗಣೇಶ್ ಕಾರ್ಣಿಕ್, ಕಿಶೋರ್ ಕುಮಾರ್, ಸುರೇಂದ್ರ ನಾಯಕ್, ಉಮಾಪ್ರಸಾದ್ ಕಡೆಕಾರ್, ಕವಿತಾ ಶಾಸ್ತ್ರಿ, ಅ್ಯಂಡ್ರೂ ರೋಡ್ರಿಗಸ್, ಡಾ ನಂದಿತಾ ಪೈ, ಸುಬ್ರಾಯ ನಾಯಕ್, ಮಧುಚಂದ್ರ ಆಡ್ಯಂತಾಯ, ಮೆಹಬೂಬ್ ಸಾಬ್ ಮತ್ತಿತರರು 16ನೇ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಸ್ವಚ್ಛತೆ: ಸ್ವಾಮಿ ಏಕಗಮ್ಯಾನಂದಜಿ ಮಾರ್ಗದರ್ಶನದಲ್ಲಿ ಮೊದಲಿಗೆ ನಾಲ್ಕು ತಂಡಗಳನ್ನು ರಚಿಸಲಾಯಿತು. ಮೊದಲ ತಂಡ ರಾಜೇಂದ್ರ ಸುಬ್ರಮಣ್ಯ ಇವರ ಜೊತೆಗೂಡಿ ಕೆಪಿಟಿ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಊರ್ವಾ ಮಾರ್ಕೆಟ್‍ನತ್ತ ತೆರಳುವ ಮಾರ್ಗಬದಿಗಳನ್ನು ಹಾಗೂ ತೋಡುಗಳಲ್ಲಿದ್ದ ಮಣ್ಣು, ಕಲ್ಲು ಕೊಳೆ ತೆಗೆದು ಸ್ವಚ್ಛಗೊಳಿಸಿದರು. ಸುಧೀರ್ ವಾಮಂಜೂರು, ರವಿ ಕೆ ಆರ್ ಅಲ್ಲಿಯೇ ರಾಶಿರಾಶಿಯಾಗಿ ಬಿದ್ದಿದ್ದ ಕಸವನ್ನು ಸ್ವಯಂ ಸೇವಕರೊಂದಿಗೆ ಸೇರಿ ತೆಗೆದು ಸ್ವಚ್ಛಗೊಳಿಸಿದರು. ಉದಯ ಕೆ ಪಿ ಹಾಗೂ ಹಿರಿಯ ಕಾರ್ಯಕರ್ತರು ತೋಡುಗಳಲ್ಲಿದ್ದ ತ್ಯಾಜ್ಯವನ್ನು ತೆಗೆದರು. ಬೆಸೆಂಟ್ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕ ಗಣೇಶ್ ಪೈ ನೇತೃತ್ವದಲ್ಲಿ ಮಠದ ಕಣಿ ರಸ್ತೆಯಲ್ಲಿದ್ದ ಹುಲ್ಲು ಸಹಿತ ಕಸವನ್ನು ತೆಗೆದು ಶ್ರಮದಾನ ಮಾಡಿದರು. ಮೂರನೇ ತಂಡ ಪೆಂಟ್ಲಾಂ ಪೇಟ್ ವೃತ್ತ ಹಾಗೂ ಗಾಂಧಿನಗರ ರಸ್ತೆಗಳನ್ನು ಗುಡಿಸಿ ಹಸನು ಮಾಡಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಸ್ವಚ್ಛತಾ ಸೇನಾ ಕಾರ್ಯಕರ್ತರು ಗಾಂಧಿನಗರದ ಅನೇಕ ಮನೆಗಳಿಗೆ ತೆರಳಿ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಿ ಕರಪತ್ರಗಳನ್ನು ಹಂಚಿದರು. ಉಪನ್ಯಾಸಕ ಸುಭಾಶ್ಚಂದ್ರ ರೈ, ಅಭಿಷೇಕ್ ವಿ ಎಸ್, ಸುರೇಶ್ ಶೆಟ್ಟಿ ಮಾರ್ಗದರ್ಶಿಸಿದರು. ಅಭಿಯಾನದ ಪ್ರಮುಖರಾದ ಸುಭೋದಯ ಆಳ್ವ ಶ್ರಮದಾನದ ಉಸ್ತುವಾರಿ ವಹಿಸಿದ್ದರು.

ದಾರಿಸೂಚಕ ಫಲಕಗಳ ನವೀಕರಣ: ನಗರದ ಹಲವೆಡೆ ಸಾರ್ವಜನಿಕರ ಅನುಕೂಲಕ್ಕಾಗಿ ಹಾಕಲಾದ ಮಾರ್ಗಸೂಚಕ ಫಲಕಗಳು ಸ್ಪಷ್ಟವಾಗಿ ತೋರುತ್ತಿಲ್ಲ. ಈ ಹಿನ್ನಲೆಯಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಅಂತಹ ಬೋರ್ಡ್‍ಗಳನ್ನು ಗುರುತಿಸಿ ನವೀಕರಿಸಲಾಗುತ್ತಿದೆ. ಇಂದು ಮಣ್ಣಗುಡ್ಡೆಯಲ್ಲಿರುವ ಗಾಂಧೀನಗರ 7ನೇ ಅಡ್ಡರಸ್ತೆ, ಮಠದ ಕಣಿ ರಸ್ತೆ ಹಾಗೂ ಗಾಂಧಿ ನಗರ ರಸ್ತೆ ಎಂಬ ಮೂರು ನಾಮಫಲಕಗಳನ್ನು ಬಣ್ಣ ಬಳಿದು ಮರು ಬರೆಯಿಸಲಾಗಿದೆ.

ಮನೆಯ ಹಸಿಕಸ ನಿರ್ವಹಣೆಗೆ ಮೂರು ಮಡಕೆಗಳ ವಿತರಣೆ: ಮನೆ ಮಟ್ಟದಲ್ಲಿ ಹಸಿಕಸ ನಿರ್ವಹಣೆಗಾಗಿ ರಾಮಕೃಷ್ಣ ಮಿಷನ್ ವತಿಯಿಂದ ನಗರದ ಅನೇಕ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಕಾರ್ಯ ಮಾಡಲಾಗಿತ್ತು. ಇದೀಗ ಹಸಿಕಸ ನಿರ್ವಹಿಸಲು ಮೂರುಮಡಕೆ ವಿಧಾನದ ಮಡಕೆಗಳನ್ನು ಮಠದಲ್ಲಿ ವಿತರಣೆ ಮಾಡಲಾಗುತ್ತಿದೆ. ಇಂದಿನವರೆಗೆ ಒಟ್ಟು ಮೂರು ಸಾವಿರಕ್ಕೂ ಅಧಿಕ ಜನ ಹೆಸರುಗಳನ್ನು ನೋಂದಾಯಿಸಿಕೊಂಡಿರುವುದನ್ನು ಸ್ಮರಿಸಬಹುದು. ಇಲ್ಲಿಯವರೆಗೆ ಏಳುನೂರು ಸೆಟ್ ಮಡಕೆಗಳನ್ನು ವಿತರಿಸಲಾಗಿದೆ. ಇನ್ನುಳಿದವರಿಗೆ ಮುಂದಿನ ಕಂತುಗಳಲ್ಲಿ ವಿತರಿಸಲಾಗುತ್ತದೆ.

49ನೇ ಸ್ವಚ್ಛ ಸೋಚ್: ವಿಚಾರ ಸಂಕಿರಣ: ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 21ನೇ ಮಾರ್ಚ 2019 ರಂದು ಸ್ವಚ್ಛತೆಯ ಕುರಿತು ವಿಚಾರ ಸಂಕಿರಣ ಜರುಗಿತು. ಕಾಲೇಜಿನ ಪ್ರಾಚಾರ್ಯರಾದ ಡಾ. ಶ್ರೀನಿವಾಸ್ ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಪಿನಾಥ್ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಡಾ. ರಾಹುಲ್ ಟಿ ಜಿ ಹಾಗೂ ರಂಜನ್ ಬೆಳ್ಳರ್ಪಾಡಿ ವಿಚಾರ ಮಂಡನೆ ಮಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಟ್ಟರು. ಈ ಗೋಷ್ಠಿಗಳು ಸ್ವಚ್ಛತೆಗೆ ಸಂಬಂಧಿಸಿದ ಭಾಷಣ, ಚರ್ಚೆ, ಪ್ರತಿಜ್ಞಾವಿಧಿ ಹಾಗೂ ಹಸಿಕಸ ಒಣಕಸದ ನಿರ್ವಹಣೆ ಪ್ರಾತ್ಯಕ್ಷಿಕೆಗಳನ್ನು ಒಳಗೊಂಡಿದ್ದವು. ಉಪನ್ಯಾಸಕ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಗುರುಪ್ರಸಾದ್ ರಾವ್ ಹಾಗೂ ಕಾಂಚನಾ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು. ಒಟ್ಟು 50 ವಿಚಾರ ಸಂಕಿರಣಗಳ ಪೈಕಿ ಇಂದಿನವರೆಗೆ 49 ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಗಿದೆ. 27ನೇ ಮಾರ್ಚ್ 2019 ರಂದು ಸಹ್ಯಾದ್ರಿ ಇಂಜನಿಯರಿಂಗ್ ಹಾಗೂ ಮೆನೇಜ್‍ಮೆಂಟ್ ಕಾಲೇಜಿನಲ್ಲಿ ಸ್ವಚ್ಛ ಸೋಚ್ ವಿಚಾರ ಸಂಕಿರಣಗಳ ಸಮಾರೋಪ ನಡೆಯಲಿದೆ. ಈ ಮೇಲ್ಕಂಡ ಸ್ವಚ್ಚತಾ ಅಭಿಯಾನಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಧನಸಹಾಯ ನೀಡಿ ಸಹಕರಿಸುತ್ತಿದೆ.


Spread the love

Exit mobile version