ವರ್ಷದ ಮೊದಲ ಮಳೆ – ಕಡಬ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಪ್ರದೇಶಗಳಲ್ಲಿ ಗುಡುಗು ಸಿಡಿಲು ಸಹಿತ ಅಕಾಲಿಕ ಮಳೆ
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆ ಸಂಜೆ ಏಕಾಏಕಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳು ಸೇರಿದಂತೆ ಕಡಬ, ನೆಟ್ಟಣ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಪಂಜ ವ್ಯಾಪ್ತಿಯಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಜಾತ್ರೆ ಸಮಯವಾದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಕಾಲಿಕವಾಗಿ 2026ರ ಹೊಸ ವರ್ಷದ ಆರಂಭದಲ್ಲೇ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದವು. ಸಂಜೆ ವೇಳೆ ದಿಢೀರನೆ ಅಬ್ಬರಿಸಿದ ಮಳೆರಾಯನಿಂದಾಗಿ ಕಚೇರಿಯಿಂದ ಮನೆಗೆ ಮರಳುವವರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ಭಕ್ತಾದಿಗಳು ಮತ್ತು ಪ್ರಯಾಣಿಕರ ಪರದಾಟ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಮಳೆಗೆ ಸಿಲುಕಿ ಹೈರಾಣಾದರು. ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಹಾಗೂ ದೇವಳದತ್ತ ತೆರಳುತ್ತಿದ್ದ ಭಕ್ತಾದಿಗಳು ಸೂಕ್ತ ಆಸರೆಯಿಲ್ಲದೆ ಪರದಾಡುವಂತಾಯಿತು. ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿದಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಬುಧವಾರ ‘ಮಕರ ಸಂಕ್ರಾಂತಿ’ ಹಬ್ಬವಿರುವುದರಿಂದ ಮಂಗಳವಾರ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಆದರೆ ಸಂಜೆ ಸುರಿದ ಧಾರಾಕಾರ ಮಳೆಯು ವ್ಯಾಪಾರಸ್ಥರ ಮತ್ತು ಗ್ರಾಹಕರ ಉತ್ಸಾಹಕ್ಕೆ ತಣ್ಣೀರೆರಚಿತು. ಹೂವು, ಹಣ್ಣು ಹಾಗೂ ತರಕಾರಿ ಮಾರುಕಟ್ಟೆಗೆ ಆಗಮಿಸಿದ್ದ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಅಂಗಡಿ ಮುಂಗಟ್ಟುಗಳ ಆಸರೆ ಪಡೆಯಬೇಕಾಯಿತು. ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಫಿ ಬೆಳೆಗಾರರಲ್ಲೂ ಈ ಅಕಾಲಿಕ ಮಳೆ ಆತಂಕ ಮೂಡಿಸಿದೆ.