ವಿಜಯಪುರದಲ್ಲಿ ಭಾರಿ ದರೋಡೆ: ಎಸ್‌ಬಿಐ ಬ್ಯಾಂಕ್‌ನಿಂದ ಕೋಟ್ಯಂತರ ನಗದು–ಚಿನ್ನ ಲೂಟಿ
ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಸೋಮವಾರ ರಾತ್ರಿ ನಾಟಕೀಯ ದರೋಡೆ ನಡೆದಿದೆ. ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳೊಂದಿಗೆ ಬಂದಿದ್ದ 5ಕ್ಕೂ ಹೆಚ್ಚು ದರೋಡೆಕೋರರು ಬ್ಯಾಂಕ್ ಸಿಬ್ಬಂದಿಯನ್ನು ಬಂಧಿಸಿ, ಕೋಟ್ಯಂತರ ನಗದು ಹಾಗೂ ಚಿನ್ನವನ್ನು ದೋಚಿಕೊಂಡು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಸುಮಾರು 8 ಕೋಟಿ ನಗದು ಮತ್ತು 50 ಕೆ.ಜಿಗೂ ಹೆಚ್ಚು ಚಿನ್ನ ಕಳವು ಆಗಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಂಕ್ ಮ್ಯಾನೇಜರ್, ಕ್ಯಾಶಿಯರ್ ಮತ್ತು ಇತರ ಸಿಬ್ಬಂದಿಯ ಕೈ–ಕಾಲುಗಳನ್ನು ಕಟ್ಟಿಹಾಕಿ, ಅವರನ್ನು ಕೋಣೆಯೊಳಗೆ ತಳ್ಳಿಹಾಕಿದ ಬಳಿಕ ದರೋಡೆ ನಡೆದಿದೆ.
ಮಹಾರಾಷ್ಟ್ರದ ಅಪರಾಧಿ ಗ್ಯಾಂಗ್ ಈ ಕೃತ್ಯಕ್ಕೆ ಸಂಬಂಧಿಸಿದೆ ಎಂಬ ಶಂಕೆಯಿಂದ, ವಿಜಯಪುರ ಪೊಲೀಸರು ಮಹಾರಾಷ್ಟ್ರದತ್ತ ಸಾಗುವ ಎಲ್ಲಾ ರಸ್ತೆಗಳಲ್ಲಿ ನಾಕಾಬಂದಿ ಹೇರಿದ್ದಾರೆ. ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಉನ್ನತಾಧಿಕಾರಿಗಳು ಸ್ಥಳದಲ್ಲೇ ಶಿಬಿರ ಹೂಡಿದ್ದು, ಶ್ವಾನದಳ ಮತ್ತು ಬೆರಳಚ್ಚು ದಳವನ್ನು ತುರ್ತುವಾಗಿ ದರೋಡೆ ನಡೆದ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಹಾಗೂ ಹಾರ್ಡ್‌ಡಿಸ್ಕ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿನ ಕ್ಯಾಮೆರಾಗಳನ್ನೂ ಪರಿಶೀಲನೆಗೆ ಒಳಪಡಿಸಿದ್ದಾರೆ. ಬ್ಯಾಂಕ್‌ನಲ್ಲಿ ಲಾಕರ್ ಇಟ್ಟಿದ್ದ ಗ್ರಾಹಕರು ಆತಂಕಗೊಂಡು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಅವರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.
ಪರಾರಿಯಾಗುವ ವೇಳೆ ದರೋಡೆಕೋರರ ಕಾರು ಹುಲಿಜಂತಿ ಗ್ರಾಮದ ಬಳಿ ಕುರಿಗಳಿಗೆ ಡಿಕ್ಕಿ ಹೊಡೆದಿದ್ದು, ಗ್ರಾಮಸ್ಥರನ್ನು ಗನ್ ತೋರಿಸಿ ಬೆದರಿಸಿ ಓಡಿಹೋಗಿದ್ದಾರೆ. KA 24 DH 2456 ನಂಬರಿನ ಕಾರಿನಿಂದ ಕೆಲವು ಚಿನ್ನಾಭರಣ ಬಿದ್ದಿರುವುದು ಕೂಡ ಪೊಲೀಸರು ಪತ್ತೆಹಚ್ಚಿದ್ದಾರೆ. ಉಳಿದ ದರೋಡೆಕೋರರು ಪ್ರತ್ಯೇಕವಾಗಿ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
“ದರೋಡೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಸಂಗ್ರಹಣೆ ನಡೆಯುತ್ತಿದೆ. ನಿಖರವಾಗಿ ಎಷ್ಟು ಪ್ರಮಾಣದ ನಗದು ಮತ್ತು ಚಿನ್ನ ಕಳವಾಗಿದೆಯೆಂಬುದು ತನಿಖೆಯ ನಂತರವೇ ತಿಳಿಯಲಿದೆ,” ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.