Home Mangalorean News Kannada News ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ; ಮತ್ತೋಮ್ಮೆ ಪಿಯು ಪ್ರಶ್ನೆಪತ್ರಿಕೆ ಸೋರಿಕೆ – ಎಲ್ಲೆಡೆ ಪ್ರತಿಭಟನೆ

ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ; ಮತ್ತೋಮ್ಮೆ ಪಿಯು ಪ್ರಶ್ನೆಪತ್ರಿಕೆ ಸೋರಿಕೆ – ಎಲ್ಲೆಡೆ ಪ್ರತಿಭಟನೆ

Spread the love

ಬೆಂಗಳೂರು: ಪ್ರಸ್ತುತ ವರ್ಷ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆ ಬರೆಯುವ ರಾಜ್ಯದ ವಿದ್ಯಾರ್ಥಿಗಳ ಅದೃಷ್ಟ ಸರಿಯಾಗಿದ್ದಂತೆ ಕಾಣುತ್ತಿಲ್ಲ. ಗುರುವಾರ ನಡೆಯಬೇಕಿದ್ದ ರಸಾಯನಶಾಸ್ತ್ರ ಪರೀಕ್ಷೆಯನ್ನು ಮತ್ತೆ ಮುಂದೂಡಲಾಗಿದೆ. ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿರುವ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ.

ಇತ್ತ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಪಿಯು ಮಂಡಳಿ ನಿರ್ದೇಶಕಿಯೇ ಇದಕ್ಕೆ ನೇರ ಹೊಣೆ. ಮಂಡಳಿಯ ವಿಫಲತೆಯೇ ಇದಕ್ಕೆ ಕಾರಣ, ಬೇರೆ ಯಾರೂ ಅಲ್ಲ ಎಂದು ಆಪಾದಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಒಂದು ದೊಡ್ಡ ಅನಾಹುತ. ಇದು ನಡೆಯಬಾರದಿತ್ತು. ಇದರ ನೈತಿಕ ಹೊಣೆಯನ್ನು ನಾನು ಹೊರುತ್ತೇನೆ. ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಯಾರದ್ದೋ ಕೈವಾಡವಿದೆ ಅವರು ಹೇಳಿದ್ದಾರೆ.

karnataka-protest

ಇಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ಮುಂದೂಡಿದ ಹಿನ್ನೆಲೆಯಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಕರೆ ಮುಖ್ಯಮಂತ್ರಿ ಕರೆ ಮಾಡಿ ಮಾಹಿತಿ ಪಡೆದರು.ಪ್ರಕರಣ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ತಿಳಿದು ಬಂದಿದೆ.

ಈ ಮಧ್ಯೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಪಿಯು ಬೋರ್ಡ್ ನಿರ್ದೇಶಕಿ ಪಲ್ಲವಿ ಆಕುರಾತಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ಮುಂದೂಡಲಾಗಿದೆ ಎಂದು ಪೊಲೀಸರಿಂದ ಇಂದು ಬೆಳಗ್ಗೆ ಮಾಹಿತಿ ಪಡೆದೆನು. ಸಂಬಂಧಪಟ್ಟ ಅಧಿಕಾರಿಗಳಿಗೆ, ಜಿಲ್ಲೆಗಳಿಗೆ ಕೂಡಲೇ ವಿಷಯ ತಲುಪಿಸಲಾಯಿತು ಎಂದರು.

ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆಗೊಂಡು ಎರಡನೇ ಸಲ ಪರೀಕ್ಷೆ ಮುಂದೂಡಿದಕ್ಕೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಸೇರಿದಂತೆ ಹಲವು ಪಕ್ಷಗಳು, ಸಂಘಟನೆಗಳು, ವಿದ್ಯಾರ್ಥಿಗಳು ಸರ್ಕಾರ ಹಾಗೂ ಪಿಯು ಮಂಡಳಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನಸಭೆಯ ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಪಿಯು ಗದ್ದಲವೇ ಸದನದಲ್ಲಿ ಪ್ರತಿಧ್ವನಿಸಿತು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದೆ. ಪ್ರಶ್ನೆ ಪತ್ರಿಕೆ ಮತ್ತೆ ಮತ್ತೆ ಸೋರಿಕೆಯಾಗುತ್ತಿದೆಯೆಂದರೆ ಸರ್ಕಾರ ಪಿಯು ಇಲಾಖೆ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ, ಎಷ್ಟು ಬೇಜವಬ್ದಾರಿಯಾಗಿದೆ ಎಂಬುದು ಗೊತ್ತಾಗುತ್ತದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಬೇಕು ಎಂದರು.

ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಕಿಮ್ಮನೆ ರತ್ನಾಕರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಸಣ್ಣ ಪುಟ್ಟ ವಿಚಾರವಲ್ಲ. ಇದರ ಹಿಂದೆ ದೊಡ್ಡ ಮಟ್ಟದ ಕೈವಾಡವಿದೆ. ಇದಕ್ಕೆ ಯಾರು ಕಾರಣ ಎಂಬುದನ್ನು ಸರ್ಕಾರ ತಕ್ಷಣವೇ ಕಂಡು ಹಿಡಿದು ಕ್ರಮ ಕೈಗೊಳ್ಳಬೇಕು. ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಸಭ್ಯತೆ, ಸಂಸ್ಕೃತಿ ಅನ್ನುವುದು ಇದ್ದರೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

ಎರಡನೇ ಬಾರಿಯೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆಕ್ರೋಶ, ಬೇಸರ ಮತ್ತು ಹತಾಶೆಯನ್ನು ಇನ್ನಷ್ಟು ಹೆಚ್ಚಿಸಿದೆ. ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಿಯು ಮಂಡಳಿ ಎದುರು ಭಾರೀ ಪ್ರತಿಭಟನೆ ನಡೆಯುತ್ತಿದ್ದು ವಿದ್ಯಾರ್ಥಿಗಳನ್ನು ತಡೆಯಲು ಪೋಲಿಸರು ಹರಸಾಹಸ ಪಡುತ್ತಿದ್ದಾರೆ.

ಈಗಾಗಲೇ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ತಪ್ಪಿತಸ್ಛರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ದೊಡ್ಡ ಆಘಾತ. ಈ ಘಟನೆ ನಡೆಯಬಾರದಿತ್ತು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು. ತಪ್ಪಿತಸ್ಥರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಸಮಾಧಾನದಲ್ಲಿರುವಂತೆ ಮನವಿ ಮಾಡಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನಸಭೆಯಲ್ಲಿ ಮಾತನಾಡಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ.ಪರಿಕ್ಷಾ ವಿಭಾಗದ ಎಲ್ಲಾ ಅಧಿಕಾರಿಗಳನ್ನು ಬದಲಾಯಿಸಲು ಸೂಚನೆ ನೀಡಿದ್ದೇನೆ ಎಂದರು.

ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ದೊಡ್ಡ ಅನಾಹುತ. ಇದರ ನೈತಿಕ ಹೊಣೆಯನ್ನು ನಾನು ಹೊರಲು ಸಿದ್ಧನಿದ್ದೇನೆ. ಆದರೆ ಇದಕ್ಕೆ ಪಿಯು ಮಂಡಳಿಯ ನಿರ್ದೇಶಕಿ ಮತ್ತು ಅಧಿಕಾರಿಗಳೇ ನೇರ ಹೊಣೆ ಎಂದು ಅವರು ಆಪಾದಿಸಿದರು.ಇಂದು ಸಂಜೆ ವೇಳೆಗೆ ಮತ್ತೆ ಪರೀಕ್ಷಾ ದಿನಾಂಕವನ್ನು ಪ್ರಕಟಿಸುವುದಾಗಿ ಹೇಳಿದರು.

ಕಿಮ್ಮನೆ ರತ್ನಾಕರ್ ಅವರ ಹೇಳಿಕೆಗೆ ತೃಪ್ತರಾಗದ ಪ್ರತಿಪಕ್ಷ ನಾಯಕರು, ಸಚಿವರು ಸಿದ್ಧಪಡಿಸಿರುವ ಉತ್ತರ ನೀಡುವುದು ಬೇಡ. ತಮ್ಮ ತಪ್ಪುಗಳನ್ನು ಸಚಿವರು ಮುಚ್ಚಲು ಯತ್ನಿಸುತ್ತಿದ್ದಾರೆ. ಕಾರಣಕರ್ತರಾದವರನ್ನು ಪತ್ತೆ ಹಚ್ಚಿ ಸಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈ ಮಧ್ಯೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ್ ತುಂಗಾ ಅವರ ಕೈವಾಡವಿದ್ದು, ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯ ಕೇಳಿಬರುತ್ತಿದೆ.


Spread the love

Exit mobile version