ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ವತಿಯಿಂದ ‘ವಿಶ್ವ ಹೃದಯ ದಿನದ ವಾಕಥಾನ್’
ಮಂಗಳೂರು: ಮಂಗಳೂರಿನ ಕೆಎಂಸಿ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ ಸೆ.21ರಂದು ‘ವಿಶ್ವ ಹೃದಯ ದಿನದ ವಾಕಥಾನ್ – 2025’ (“World Heart Day Walkathon 2025”) ಅನ್ನು ಆಯೋಜಿಸುವುದಾಗಿ ಆಸ್ಪತ್ರೆಯ ಡೀನ್ ಡಾ.ಉಣ್ಣಿಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಕೆಎಂಸಿ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ಅವರು, ‘ಒಂದು ಬೀಟ್ ಕೂಡ ತಪ್ಪಿಸಿಕೊಳ್ಳಬೇಡಿ’ ಎನ್ನುವುದು ಈ ವರ್ಷದ ವಿಶ್ವ ಹೃದಯ ದಿನದ ಥೀಮ್ ಆಗಿದೆ. ಹೃದಯ ಕಾಯಿಲೆಗಳ ಪ್ರಮಾಣವು, ವಿಶೇಷವಾಗಿ ಯುವಕರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ. ನಿಯಮಿತ ಆರೋಗ್ಯ ತಪಾಸಣೆ, ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಪದ್ಧತಿ ಹೃದಯ ರಕ್ಷಣೆಗೆ ಅಗತ್ಯ ಎಂದು ಹೇಳಿದರು.
ವಾಕಥಾನ್ ಸೆಪ್ಟೆಂಬರ್ 21, ಭಾನುವಾರ ಬೆಳಿಗ್ಗೆ 6.30ಕ್ಕೆ ಕೆಎಂಸಿ ಆಸ್ಪತ್ರೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ, ಬಲ್ಮಠ ರಸ್ತೆ, ತಾಜ್ ಮಹಲ್, ಮಿಲಾಗ್ರಿಸ್ ಚರ್ಚ್, ಐಎಂಎ ಹಾಲ್ ಅತ್ತಾವರ ಹಾಗೂ ಎಸ್‌ಎಲ್ ಮಥಿಯಾಸ್ ರಸ್ತೆಯ ಮೂಲಕ ಸಾಗಿಕೊಂಡು ಮರೇನಾ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯಗೊಳ್ಳಲಿದೆ. ಮಂಗಳೂರು ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್. (ಐಪಿಎಸ್) ವಾಕಥಾನ್‌ಗೆ ಚಾಲನೆ ನೀಡಲಿದ್ದಾರೆ. ನೋಂದಣಿ ಉಚಿತ ಆದರೆ ಕಡ್ಡಾಯವಾಗಿದ್ದು, ಭಾಗವಹಿಸುವವರು ತಮ್ಮ ವಿವರಗಳನ್ನು ವಾಟ್ಸಾಪ್ ಮೂಲಕ +91 90081 67071 ಕ್ಕೆ ಕಳುಹಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.