ವೋಟ್ ಚೋರಿ ಮೂಲಕ ಗೆಲುವಿನ ಅನಿವಾರ್ಯತೆ ಪ್ರಸಾದ್ ಕಾಂಚನ್ ಗೆ ಇದೆ ಹೊರತು ಬಿಜೆಪಿ ಪಕ್ಷಕ್ಕಲ್ಲ : ದಿನೇಶ್ ಅಮೀನ್
ಉಡುಪಿಯಲ್ಲಿ ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ವೋಟ್ ಚೋರಿ ಮೂಲಕ ಬಿಜೆಪಿ ಪಕ್ಷ ಗೆದ್ದಿದೆ ಎಂಬ ಅಧಾರ ರಹಿತ ಬಾಲಿಶ ಹೇಳಿಕೆಯನ್ನು ಕಳೆದ ಚುನಾವಣೆಯಲ್ಲಿ ಉಡುಪಿ ಜನತೆಯ ಮೂಲಕ ಹೀನಾಯವಾಗಿ ಸೋಲಿಸಲ್ಪಟ್ಟ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ನೀಡಿದ್ದು, ಉಡುಪಿ ಜಿಲ್ಲೆಯಲ್ಲಿ ವೋಟ್ ಚೋರಿ ನಡೆಸಿ ವಾಮ ಮಾರ್ಗವಾಗಿ ಗೆಲ್ಲುವ ಅನಿವಾರ್ಯತೆ ಉಡುಪಿ ಕ್ಷೇತ್ರಕ್ಕೆ ಚುನಾವಣೆ ಸಂದರ್ಭದಲ್ಲಿ ಲಕ್ಕಿಡಿಪ್ ಅಭ್ಯರ್ಥಿ ಪ್ರಸಾದ್ ಕಾಂಚನ್ ರಿಗೆ ಇದೆ ಹೊರತು ಬಿಜೆಪಿ ಪಕ್ಷಕ್ಕಲ್ಲ ಎಂದು ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಚುನಾವಣಾ ವ್ಯವಸ್ಥೆ, ಚುನಾವಣಾ ಆಯೋಗ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಕಪ್ಪುಚುಕ್ಕೆ ಇಡುವ ರೀತಿಯಲ್ಲಿ ಗಂಭೀರ ಆರೋಪವನ್ನು ಮಾಡುತ್ತಿರುವ ರಾಹುಲ್ ಗಾಂಧಿಯ ಅಪ್ರಬುದ್ಧ ಚಾಳಿಯನ್ನೇ ಮುಂದುವರಿಸುವ ಮೂಲಕ ರಾಹುಲ್ ಗಾಂಧಿಯನ್ನೇ ಮೂರ್ಖತನದಲ್ಲಿ ಮೀರಿಸಲು ಪ್ರಸಾದ್ ಕಾಂಚನ್ ಮುಂದಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ತಕಾರರುಗಳಿದ್ದರೆ ಈ ಬಗ್ಗೆ ದಾಖಲೆಗಳನ್ನು ಸಲ್ಲಿಸಿ ನ್ಯಾಯಾಂಗದ ಮೂಲಕ ಪ್ರಶ್ನಿಸಬೇಕೇ ಹೊರತು ಬಸ್ ನಿಲ್ದಾಣದ ಮುಂದೆ ಮೈಕ್ ಹಿಡಿದು ಅರಚಿ ಮೈಪರಚಿಕೊಂಡರೆ ಪ್ರಯೋಜನವಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮೂಲಕ ಉಡುಪಿಯ ಜನತೆ ನೀಡಿದ ಜನಾದೇಶವನ್ನು ಒಪ್ಪದೆ ಚುನಾವಣೆ ನಡೆದು ಸುಮಾರು 30 ತಿಂಗಳ ಬಳಿಕ ಒಮ್ಮೆಲೇ ಜ್ಞಾನೋದಯವಾದಂತೆ ಆಧಾರ ರಹಿತ ಆರೋಪ ಮಾಡುವ ಮೂಲಕ ಪ್ರಸಾದ್ ಕಾಂಚನ್ ಉಡುಪಿಯ ಸುಶಿಕ್ಷಿತ ಪ್ರಜ್ಞಾವಂತ ಹಾಗೂ ರಾಷ್ಟ್ರೀಯವಾದಿ ಚಿಂತನೆಯ ಮತದಾರರಿಗೆ ಅವಮಾನ ಮಾಡಿದ್ದು, ತಕ್ಷಣ ಉಡುಪಿ ಜನತೆಯ ಬೇಷರತ್ತಾಗಿ ಕ್ಷಮೆ ಯಾಚಿಸಬೇಕು.
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪುಡಾರಿಗಳು ಅಧಿಕಾರಿಗಳ ಮೇಲೆ ಒತ್ತಡ ಆಮಿಷ ಹೇರಿ ಕೈಗೊಂಬೆಯಂತೆ ಮಾಡಿಕೊಡು ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿ ಪರಿವರ್ತನೆಯಾಗಿ ವ್ಯಾಪಕ ಭ್ರಷ್ಟಾಚಾರ ಮಾಡುತ್ತಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಕಾರ್ಯವೈಖರಿ, ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ಅಸಡ್ಡೆ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ನಾಮ ನಿರ್ದೇಶನಗೊಂಡ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಬಗ್ಗೆ ಸದಾ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಜಿಲ್ಲಾಸ್ಪತ್ರೆ ಬಾಕಿ ಕಾಮಗಾರಿ ಅನುದಾನ, ಹಕ್ಕು ಪತ್ರ, ಪ್ರಾಕೃತಿಕ ವಿಕೋಪ ಅನುದಾನ, ಹಾಸ್ಟೆಲ್ ಕೊರತೆ, ರಸ್ತೆ ಕಾಮಗಾರಿಗೆ ಯಾವುದೇ ಅನುದಾನ ಬಿಡುಗಡೆ ಮಾಡದೇ ಉಡುಪಿ ಜನತೆಗೆ ಸಮಸ್ಯೆ ತಂದಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ಧೈರ್ಯ ಮತ್ತು ಯೋಗ್ಯತೆ ಪ್ರಸಾದ್ ಕಾಂಚನ್ ರವರಿಗೆ ಇಲ್ಲ.
ಪಾರದರ್ಶಕ ಚುನಾವಣೆಯ ಬಗ್ಗೆ ಮಾತನಾಡುವ ಪ್ರಸಾದ್ ಕಾಂಚನ್ ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ನಡೆಸಿ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಬೂತ್ ಗಳ ಮೇಲೆ ಬೆಂಕಿ ಹಚ್ಚಿ ಕಾರ್ಯಕರ್ತರಿಗೆ ಹಲ್ಲೆ ಮಾಡಿ ನಕಲಿ ಮತದಾನ ಮಾಡಿದ ಘಟನೆಯ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ಅವರ ತಾಯಿ ಸರಳಾ ಕಾಂಚನ್ ಅವರ ಬಳಿ ಕೇಳಿ ತಿಳಿಯಲಿ.
ಉಡುಪಿಯ ಹಲವು ಉದ್ಯಮಿಗಳು, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ವ್ಯಕ್ತಿಗಳ ಮೂಲಕ ಹಣ ಸಂಗ್ರಹಿಸಿ ಕಾರ್ಯಕ್ರಮ ನಡೆಸಿ ಅದೇ ವ್ಯಕ್ತಿಯಲ್ಲಿ ಅಂತಹ ವ್ಯಕ್ತಿಗಳಿಗೆ ಸನ್ಮಾನ ಮಾಡುವ ಬೆಳವಣಿಗೆ ನಡೆಯುತ್ತಿರುವುದು ದುರದೃಷ್ಟಕರ.
ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನಾತ್ಮಕವಾಗಿ ಸದೃಢವಾಗಿದ್ದು, ಬಿಜೆಪಿ ಸಿದ್ಧಾಂತ, ರಾಷ್ಟ್ರೀಯತೆ, ಅಭಿವೃದ್ಧಿ ಪರ ಚಿಂತನೆ ಹಾಗೂ ಹಿಂದುತ್ವದ ವಿಚಾರದಲ್ಲಿ ಜಿಲ್ಲೆಯ ಪ್ರಜ್ಞಾವಂತ ಜನತೆ ಗ್ಯಾರಂಟಿ ಯೋಜನೆಗಳನ್ನು ಮೀರಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು 5 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಪ್ರಸಾದ್ ಕಾಂಚನ್ ಇನ್ನಾದರೂ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮೊದಲು ತಮ್ಮ ಪಕ್ಷದ ನಾಯಕರ ಮಾರ್ಗದರ್ಶನ ಪಡೆದು ಹೇಳಿಕೆ ನೀಡಲಿ. ಪ್ರಸಾದ್ ಕಾಂಚನ್ ರವರ ಈ ಬಾಲಿಶ ಹೇಳಿಕೆಗಳ ಬಗ್ಗೆ ನಮ್ಮ ಅನುಕಂಪವಿದೆ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
