Home Mangalorean News Kannada News ಶಾಂತಿ ಸುವ್ಯವಸ್ಥೆ ಕಾಪಾಡಲು ಜಾತಿ ಧರ್ಮ, ಪಕ್ಷ ಎಂಬ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ –...

ಶಾಂತಿ ಸುವ್ಯವಸ್ಥೆ ಕಾಪಾಡಲು ಜಾತಿ ಧರ್ಮ, ಪಕ್ಷ ಎಂಬ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ – ರಮೇಶ್ ಕಾಂಚನ್

Spread the love

ಶಾಂತಿ ಸುವ್ಯವಸ್ಥೆ ಕಾಪಾಡಲು ಜಾತಿ ಧರ್ಮ, ಪಕ್ಷ ಎಂಬ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ – ರಮೇಶ್ ಕಾಂಚನ್

ಉಡುಪಿ: ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡು ಇದೀಗ ಅಧಿಕಾರ ಸ್ವೀಕರಿಸಿರುವ ನೂತನ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಶಾಂತಿ ಹಬ್ಬಿಸುವವರ ವಿರುದ್ದ ಯಾವುದೇ ಜಾತಿ ಧರ್ಮ, ಪಕ್ಷ ಎಂಬ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮನವಿ ಮಾಡಿದ್ದಾರೆ.

ಪಕ್ಕದ ದ.ಕ ಜಿಲ್ಲೆಯಲ್ಲಿ ಕೋಮು ಪ್ರಚೋದಿತ ಹಿಂಸಾಚಾರಕ್ಕೆ ಅಮಾಯಕರು ಬಲಿಯಾಗುತ್ತಿದ್ದು ಪೋಲಿಸ್ ಇಲಾಖೆ ಕೆಲವೊಂದು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿದ್ದು ಅಂತಹ ಯಾವುದೇ ಘಟನೆ ಉಡುಪಿ ಜಿಲ್ಲೆಯಲ್ಲಿ ಘಟಿಸದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

ಕೋಮು ಪ್ರಚೋದನೆ ಮಾಡುವವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕವಾಗಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಬೇಕು. ಅಂತಹ ಅಶಾಂತಿಗೆ ಕಾರಣವಾಗುವ ವ್ಯಕ್ತಿಗಳ ವಿರುದ್ದ ಯಾವುದೇ ರೀತಿಯ ಪಕ್ಷಪಾತದ ಧೋರಣೆ ತಾಳದೆ ಯಾವುದೇ ಧರ್ಮ, ಜಾತಿ ಅಥವಾ ಪಕ್ಷದವರು ಎನ್ನುವುದನ್ನು ನೋಡದೆ , ಯಾವುದೇ ಒತ್ತಡಕ್ಕೆ ಮಣಿಯದೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗ ಅಶಾಂತಿ ಹಬ್ಬಿಸುವವರಿಗೆ ಹೆದರಿಕೆ ಇರುತ್ತದೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿಗಳು ಅನುಸರಿಸಿದ ಕಟ್ಟುನಿಟ್ಟಿನ ಕ್ರಮವನ್ನು ನೂತನ ಎಸ್ಪಿಯವರು ಕೂಡ ಮುಂದುವರೆಸಿದ್ದಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು, ಕೋಮು ಪ್ರಚೋದನಾ ಶಕ್ತಿಗಳು ಮತ್ತೆ ತಲೆ ಎತ್ತಲು ಸಾಧ್ಯವಾಗುವುದಿಲ್ಲ. ಜಿಲ್ಲೆಯ ಜನತೆ ನೆಮ್ಮದಿಯಿಂದ ಬದುಕು ಸಾಗಿಸುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಕೈಗೊಳ್ಳುವ ಎಲ್ಲಾ ರೀತಿಯ ಕಾನೂನು ಬದ್ದ ಕಟ್ಟುನಿಟ್ಟಿನ ಕ್ರಮಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸದಾ ಬೆಂಬಲ ನೀಡುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version