Home Mangalorean News Kannada News ಶಿರ್ವ ಡೊನ್ ಬಾಸ್ಕೊ ಸಿಬಿಎಸ್‍ಇ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ

ಶಿರ್ವ ಡೊನ್ ಬಾಸ್ಕೊ ಸಿಬಿಎಸ್‍ಇ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ

Spread the love

ಶಿರ್ವ ಡೊನ್ ಬಾಸ್ಕೊ ಸಿಬಿಎಸ್‍ಇ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ

ಶಿರ್ವ: ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಅವರ ಭವಿಷ್ಯ ರೂಪಿಸಿ ಭವ್ಯ ಭಾರತವನ್ನು ಕಟ್ಟುವ ಕೆಲಸ ಮಾಡುವುದು ಶೈಕ್ಷಣಿಕ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಬುಧವಾರ ಶಿರ್ವ ಡೊನ್ ಬಾಸ್ಕೊ ಸಿಬಿಎಸ್‍ಇ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

foundation-stone-don-bosco-cbse-school-shirva-20160907-00

ಇಂದು ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದು ಸ್ಪರ್ಧೆಗೆ ತಕ್ಕಂತೆ ನಮ್ಮ ಮಕ್ಕಳನ್ನು ಅಣಿಗೊಳಿಸಿ ಅವರೂ ಕೂಡ ವಿಜಯಶಾಲಿಗಳಾಗುವ ನಿಟ್ಟಿನಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆಯಾದಂತೆ ನಾವೂ ಕೂಡ ಬದಲಾಗಬೇಕಾದ ಪರಿಸ್ಥಿತಿ ಇದೆ. ಇದನ್ನರಿತು ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಐದು ವಲಯಗಳಲ್ಲಿ ತಲಾ ಒಂದು ಸಿಬಿಎಸ್‍ಇ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯಲು ಚಿಂತನೆ ನಡೆಸಿದ್ದು ಅದರಂತೆ ಕುಂದಾಪುರ ಹಾಗೂ ಉಡುಪಿಯಲ್ಲಿ ಈಗಾಗಲೇ ಆರಂಭಿಸಿದ್ದು, ಶಿರ್ವದಲ್ಲಿ ಕೂಡ ಈ ವರ್ಷದಿಂದ ಆರಂಭವಾಗಿದೆ ಮುಂದಿನ ದಿನಗಳಲ್ಲಿ ಕಲ್ಯಾಣಪುರ ಹಾಗೂ ಕಾರ್ಕಳ ವಲಯಗಳಲ್ಲಿ ಕೂಡ ಆರಂಭಿಸುವ ಇರಾದೆಯನ್ನು ಹೊಂದಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಕೆಥೊಲಿಕ್ ಎಜ್ಯುಕೇಶನ್ ಸೊಸೈಟಿ ಇದರ ಕಾರ್ಯದರ್ಶಿ ವಂ ಲಾರೆನ್ಸ್ ಡಿಸೋಜಾ ಮಾತನಾಡಿ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ಉತ್ತಮ ಮೌಲ್ಯಯುತ ಶಿಕ್ಷಣ ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆ ಅದಕ್ಕೆ ತಕ್ಕಂತೆ ವ್ಯವಸ್ಥಿತ ಶಿಕ್ಷಣ ಸಂಸ್ಥೆಗಳ ಅಗತ್ಯತೆ ಇದ್ದು ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿರುವುದು ಶಿಕ್ಷಣ ಸಂಸ್ಥೆಗಳ ಜವಬ್ದಾರಿ ಎಂದರು.

ಕಾರ್ಯಕ್ರಮದಲ್ಲಿ ಶಿರ್ವ ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ ಸ್ಟ್ಯಾನಿ ತಾವ್ರೊ, ಶಾಲೆಯ ಪ್ರಾಂಶುಪಾಲ ವಂ ಮಹೇಶ್ ಡಿ’ಸೋಜಾ, ಸಹಾಯಕ ಧರ್ಮಗುರು ವಂ ಕೆನ್ಯೂಟ್, ಡಾನ್ ಬಾಸ್ಕೋ ಯೂತ್ ಸೆಂಟರ್ ಇದರ ನಿರ್ದೇಶಕ ವಂ ಫೆಲಿಕ್ಸ್ ಸೆರಾವೊ, ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜಾ, ಕಾರ್ಯದರ್ಶಿ ವಿಲಿಯಂ ಮಚಾದೊ, ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೊಡ್ರಿಗಸ್ ಉಪಸ್ಥಿತರಿದ್ದರು.

ಶಿರ್ವ ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ ಸ್ಟ್ಯಾನಿ ತಾವ್ರೊ ಸ್ವಾಗತಿಸಿ ಸಹ ಶಿಕ್ಷಕಿ ಐರಿನ್ ರೊಡ್ರಿಗಸ್ ವಂದಿಸಿದರು. ಪರ್ಲ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version