ಶೀರೂರು ಪರ್ಯಾಯ ಸ್ವಾಗತ ಸಮಿತಿ ಪದಾಧಿಕಾರಿಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ
ಉಡುಪಿ: ಶೀರೂರು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಭೇಟಿಯಾಗಿ ಪರ್ಯಾಯ ಸ್ವಾಗತ ಸಮಿತಿಯ ಗೌರವ ಸಲಹೆಗಾರರಾಗಿ ಆಯ್ಕೆ ಮಾಡಿದ ಬಗ್ಗೆ ಪತ್ರವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಮುಂಬರುವ ಶೀರೂರು ಮಠದ ಪರಮಪೂಜ್ಯ ಶ್ರೀ ಶ್ರೀ ವೇದ ವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವವನ್ನು ಅತ್ಯಂತ ವಿಶೇಷವಾಗಿ ಕೃಷ್ಣ ಭಕ್ತರ ಸಹಕಾರದೊಂದಿಗೆ ಆಯೋಜಿಸುವ ನಿಟ್ಟಿನಲ್ಲಿ ಕಾರ್ಯ ಸಂಕಲ್ಪಿಸಿದ್ದು, ನಗರದ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಪರ್ಯಾಯ ಮಹೋತ್ಸವದ ಆಚರಣೆಗೆ ರಾಜ್ಯ ಸರಕಾರದ ಮೂಲಕ ವಿಶೇಷ ಸಹಕಾರ ನೀಡುವಂತೆ ಮನವಿ ಮಾಡಿ, ಶೀಘ್ರದಲ್ಲಿ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಪರ್ಯಾಯ ಮಹೋತ್ಸವದ ಬಗ್ಗೆ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಸುವುದಾಗಿ ತಿಳಿಸಿದರು.
ಸ್ವಾಗತ ಸಮಿತಿಯ ಮನವಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಪರ್ಯಾಯ ಮಹೋತ್ಸವದ ಯಶಸ್ಸಿಗೆ ಸಂಪೂರ್ಣ ಸಹಕಾರದ ಆಶಯ ವ್ಯಕ್ತಪಡಿಸಿ, ಶ್ರೀಕೃಷ್ಣ ಮಠದ ಭಕ್ತರಾಗಿ ಸರಕಾರದ ಮೂಲಕ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಕೊಡವೂರು, ಸಂಚಾಲಕರಾದ ರಮೇಶ್ ಕಾಂಚನ್, ಕಾರ್ಯದರ್ಶಿ ಮೋಹನ್ ಭಟ್, ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ, ಜೊತೆ ಕಾರ್ಯದರ್ಶಿ ಶ್ರೀಕಾಂತ ನಾಯಕ್, ಸಂದೀಪ್ ಮಂಜ ಮೊದಲಾದವರು ಉಪಸ್ಥಿತರಿದ್ದರು.