Home Mangalorean News Kannada News ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಎಸ್‌ಎಸ್‌ಎಲ್‌ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸನ್ಮಾನ

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಎಸ್‌ಎಸ್‌ಎಲ್‌ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸನ್ಮಾನ

Spread the love

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಎಸ್‌ಎಸ್‌ಎಲ್‌ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸನ್ಮಾನ

ಮಂಗಳೂರು: ಮಂಗಳೂರಿನ ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶೇ. 90ರಷ್ಟು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ ನಾಲ್ವರು ವಿದ್ಯಾರ್ಥಿನಿಯರನ್ನು ಚಿತ್ತಾರ-2019ರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ, ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನೂ ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸುಕೇಶ್ ಕುಮಾರ್ ಶೆಟ್ಟಿ, ಹಿರಿಯ ಪತ್ರಕರ್ತ ವಿನೋದ್ ಪುದು, ಸಾಮಾಜಿಕ ಕಾರ್ಯಕರ್ತ ರೆಹಮಾನ್ ಕುಂಜತ್ತಬೈಲ್ ಮತ್ತು ಶಿಬಿರದ ಮುಖ್ಯ ಸಂಘಟಕ ಪ್ರೇಮನಾಥ್ ಮರ್ಣೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸನ್ಮಾನ ಮಾಡಿ ಮಾತನಾಡಿದ ಹರಿಕೃಷ್ಣ ಪುನರೂರು, ತಾವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳನ್ನು ಗೌರವಿಸಿದ್ದೆ. ಈಗ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಬೇಕಾದ ಅಗತ್ಯವಿದೆ. ಕನ್ನಡವನ್ನು ಉಳಿಸಿ ಬೆಳೆಸುವ ಮತ್ತು ನೆಲದ ಪ್ರೀತಿಯನ್ನು ಗಾಢವಾಗಿಸುವ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್, ಪತ್ರಕರ್ತರ ಸಾಮಾಜಿಕ ಕಾಳಜಿಯನ್ನು ವಿವರಿಸಿದರು. ಬ್ರ್ಯಾಂಡ್ ಮಂಗಳೂರಿನ ಪರಿಕಲ್ಪನೆ ಮತ್ತು ಈ ದಿಶೆಯಲ್ಲಿ ನಡೆದ ಕೆಲವೊಂದು ಪ್ರಯತ್ನಗಳನ್ನು ವಿವರಿಸಿದರು.

ಇದೇ ವೇಳೆ, ಚಿಂತನ ಸಾಂಸ್ಕೃತಿಕ ಬಳಗದಿಂದ ನಾಲ್ಕು ದಿನಗಳಿಂದ ನಡೆಯುತ್ತಿರುವ ಚಿತ್ತಾರ2019ರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವೂ ನಡೆಯಿತು. ಕಾರ್ಯಕ್ರಮದ ಬಳಿಕ ಚಿಣ್ಣರು ವೈವಿಧ್ಯಮಯ ಕಾರ್ಯಕ್ರಮದ ಮೂಲಕ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು.

ಚಿಂತನ ಸಾಂಸ್ಕೃತಿಕ ಬಳಗದ ದಯಾನಂದ್, ಸಂಧ್ಯಾ ಪ್ರೇಮನಾಥ್, ವಿನೀತ್, ಸುಜನ್ ಜೆ. ಶೆಟ್ಟಿ, ಚಿತ್ರಲೇಖಾ, ರೇಖಾ ಕುಂದರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

Exit mobile version