Home Mangalorean News Kannada News ಸಿದ್ದಾಪುರದಲ್ಲಿ ಪ್ರತ್ಯಕ್ಷವಾದ ಒಂಟಿ ಸಲಗ: ಶಾಲೆಗಳಿಗೆ ರಜೆ ಘೋಷಣೆ, ಸಂತೆ ರದ್ದು

ಸಿದ್ದಾಪುರದಲ್ಲಿ ಪ್ರತ್ಯಕ್ಷವಾದ ಒಂಟಿ ಸಲಗ: ಶಾಲೆಗಳಿಗೆ ರಜೆ ಘೋಷಣೆ, ಸಂತೆ ರದ್ದು

Spread the love

ಸಿದ್ದಾಪುರದಲ್ಲಿ ಪ್ರತ್ಯಕ್ಷವಾದ ಒಂಟಿ ಸಲಗ: ಶಾಲೆಗಳಿಗೆ ರಜೆ ಘೋಷಣೆ, ಸಂತೆ ರದ್ದು

ಕುಂದಾಪುರ: ತಾಲೂಕಿನ ಸಿದ್ದಾಪುರ, ಹೊಸಂಗಡಿ ಭಾಗದಲ್ಲಿ ಕಾಡಾನೆಯೊಂದು ಕಳೆದ ಎರಡು ದಿನಗಳಿಂದ ಸಂಚರಿಸುತ್ತಿರುವ ಹಿನ್ನಲೆಯಲ್ಲಿ ಜೂನ್ 4 ರಂದು ಬುಧವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಸಿದ್ದಾಪುರ ಹೊಸಂಗಡಿ ಮತ್ತು ಕಮಲಶಿಲೆ ಗ್ರಾಮಗಳ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪೌಢಶಾಲೆಗಳವರೆಗೆ ರಜೆ ಘೋಷಣೆ ಮಾಡಲಾಗಿದೆ. ಬುಧವಾರ ನಡೆಯಬೇಕಾಗಿದ್ದು ವಾರದ ಸಿದ್ದಾಪುರ ಸಂತೆಯನ್ನು ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ.

ಆಗುಂಬೆಯಿಂದ 30 ಕಿಮೀ ದೂರದಲ್ಲಿರುವ ಪ್ರದೇಶ ಇದಾಗಿದ್ದು, ಸತತ 2 ದಿನಗಳಿಂದ ಆನೆ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿ ಬೀಡು ಬಿಟ್ಟಿದ್ದಾರೆ. ಹೆಚ್ಚಿನ ಕಾರ್ಯಾಚರಣೆಗೆ ಕುಮ್ಕಿ ಆನೆಗಳನ್ನು ತರಿಸಿ ಸೆರೆಹಿಡಿಯಲು ತಯಾರಿ ನಡೆಸಲಾಗಿದೆ. ಕಂದಾಯ ಇಲಾಖೆ, ಕುಂದಾಪುರ ತಾಲೂಕು ಆಡಳಿತ ಕಾಡಾನೆ ವಿಚಾರದಲ್ಲಿ ಸಾರ್ವಜನಿಕರು ಭಯಭೀತರಾಗದೆ ಜಾಗರೂಕತೆಯಿಂದ ಓಡಾಡಬೇಕಾಗಿ ಸೂಚನೆ ನೀಡಿದೆ.

ಉಡುಪಿ – ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಬಾಳೆಬರೆ ಘಾಟಿ ರಸ್ತೆಯಲ್ಲಿ ಗಂಡು ಕಾಡಾನೆ ದಾರಿತಪ್ಪಿ ರಾಜ್ಯ ಹೆದ್ದಾರಿಯಲ್ಲಿ ನಡೆದು ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ ಹೊಸಂಗಡಿ ಕಡೆಗೆ ಬಂದಿದೆ. ಹಾಸನ ಕಾಡಿನ ಆನೆ ಕಾರಿಡಾರ್ ನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಸುಮಾರು 12 ವರ್ಷ ಪ್ರಾಯದ ಗಂಡು ಕಾಡಾನೆಯು ದಾರಿ ತಪ್ಪಿ ವಾರದ ಹಿಂದೆ ಕೊಪ್ಪದ ಮೂಲಕ ಶಿವಮೊಗ್ಗ ಜಿಲ್ಲೆಗೆ ಬಂದಿದೆ ಎಂದು ಹೇಳಲಾಗಿದೆ. ಮಂಗಳವಾರ ಸಂಜೆ ವೇಳೆ ಒಂಟಿ ಆನೆ ಮಾಸ್ತಿಕಟ್ಟೆ ಆಸುಪಾಸು ಓಡಾಡಿದ್ದು ಬಹುತೇಕ ಸಿದ್ದಾಪುರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಾಟಿ ಪ್ರದೇಶದಿಂದ ಆನೆ ಹೊರಬಂದರೆ ಸ್ಥಳೀಯವಾಗಿ ಹಲವಷ್ಟು ಮನೆಗಳು ಇರುವ ಕಾರಣ ಆತಂಕವಿದೆ. ಹೊಸಂಗಡಿ, ಕೆಪಿಸಿ, ಭಾಗಿಮನೆ ಸೇರಿದಂತೆ ಅಮಾಸೆಬೈಲು, ತೊಂಬಟ್ಟು ಭಾಗದ ನಿವಾಸಿಗಳು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಆನೆಯ ಸಂಚಾರವನ್ನು ಮಾಸ್ತಿಕಟ್ಟೆಯ ಅರಣ್ಯ ಚೆಕ್ ಪೋಸ್ಟ್ ನ ಸಿಬಂದಿ ಹಾಗೂ ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿದ್ದಾರೆ. ಈ ಆನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

‘ಈಗಾಗಾಲೇ ಆನೆ ತಡೆ ಪಡೆ(ಎಲಿಫೆಂಟ್ ಟಾಸ್ಕ್ ಪೋರ್ಸ್), ಅರಣ್ಯ ಇಲಾಖೆ, ವನ್ಯಜೀವಿ ವಲಯದ ಅಧಿಕಾರಿ, ಸಿಬ್ಬಂದಿಗಳು ಜಿಪಿಎಸ್ ತಂತ್ರಜ್ಞಾನದ ಮೂಲಕ ಕಾಡಾನೆ ಸಂಚಾರದ ಮಾಹಿತಿ ಪಡೆಯುತ್ತಿ ದ್ದಾರೆ. ಘಾಟಿಯ ಚಂಡಿಕಾಂಬ ದೇವಸ್ಥಾನದ ಬಳಿ ಸಂಜೆ ವೇಳೆಗೆ ಕೊನೆಯ ಲೊಕೇಶನ್ ಸಿಕ್ಕಿದೆ. ಆಸುಪಾಸಿನ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು. ರಾತ್ರಿ ವೇಳೆ ಮನೆಯಿಂದ ಹೊರಗೆ ಓಡಾಟ ಬೇಡ. ಆನೆ ಸಂಚಾರ ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿ. ವಾಹನ ಸವಾರರು ಎಚ್ಚರಿಕೆ ಯಿಂದಿರಬೇಕು. ಯಾವುದೇ ಕಾರಣಕ್ಕೂ ಜನರು ಕಾಡಾನೆಗೆ ಪ್ರಚೋದಿಸ ಬೇಡಿ’ಎಂದು ಕುದುರೆಮುಖ ವನ್ಯ ಜೀವಿ ವಿಭಾಗ ಡಿಸಿಎಫ್ ಒ ಶಿವರಾಂ ಬಾಬು ತಿಳಿಸಿದ್ದಾರೆ.


Spread the love

Exit mobile version