ಸುಪಾರಿ ನೀಡಿ ವಕೀಲ ಹತ್ಯೆ: ತಲೆಮರೆಸಿಕೊಂಡಿದ್ದ ಅಪರಾಧಿ ಬಂಧನ
ಬೆಳ್ತಂಗಡಿ: ಟಿ. ದಿನೇಶ್ ಶೆಟ್ಟಿ @ ದಿನ್ನು (ತಂದೆ: ತಿಮ್ಮಪ್ಪ ಶೆಟ್ಟಿ), ವಾಸ: ಮುಗಳಿ ಹೊಸ ಮನೆ, ನಾಯರ್ ತರ್ಪು, ನಾಲಾ ಅಂಚೆ, ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆ – ಈತ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಕ್ರಂ.ಸಂ.144/2009ರ ಕೊಲೆ ಪ್ರಕರಣದಲ್ಲಿ ಭೂಗತ ಲೋಕದ ಪಾತಕಿ ರವಿ ಪೂಜಾರಿ ಹಾಗೂ ಕಲಿ ಯೋಗೀಶ್ ಅವರಿಂದ ಸುಪಾರಿ ಪಡೆದು ವಕೀಲ ಖಾಸೀಂ ನೌಷಾದ್ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಮಾನ್ಯ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ.
ಈತ ಸುಮಾರು 11 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿದ್ದ ಮತ್ತು ನಂತರ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಡಿಸೆಂಬರ್ 2019ರಲ್ಲಿ ಬಿಡುಗಡೆಗೊಂಡಿದ್ದ.
ಅದೇ ಬಳಿಕ, ಕಾವೂರು ಪೊಲೀಸ್ ಠಾಣೆಯ ಕ್ರಂ.ಸಂ.01/2019ರ ಅಪಹರಣ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯ ಕ್ರಂ.ಸಂ.88/2022ರ ವಂಚನೆ ಪ್ರಕರಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಕ್ರಂ.ಸಂ.06/2023ರ ಸುಲಿಗೆ ಪ್ರಕರಣಗಳಲ್ಲಿ ಸಹ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಕಳೆದ ಒಂದೂವರೆ ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತನನ್ನು ದಿನಾಂಕ 25-11-2025ರಂದು ಉತ್ತರ ಉಪವಿಭಾಗದ ಎಸಿಪಿ ಹಾಗೂ ಅವರ ತಂಡ ದಸ್ತಗಿರಿ ಮಾಡಿದ್ದಾರೆ.
