ಸುರತ್ಕಲ್: ದೈವಗಳ ಮೂರ್ತಿ ಹಾಗೂ ಪೂಜಾ ಪರಿಕರ ಕಳ್ಳತನ ಪ್ರಕರಣ – ಇಬ್ಬರ ಬಂಧನ
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೈವಗಳ ಮೂರ್ತಿ ಹಾಗೂ ಪೂಜಾ ಪರಿಕರಗಳ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಕಳವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಳಾಯಿ ಗ್ರಾಮದ ಯಶೋದ ಕ್ಲಿನಿಕ್ ಸಮೀಪದ ನಿವಾಸಿ ಶ್ರೀಮತಿ ಅಮಿತಾ (43), ಗಂಡ ಸುರೇಶ್, ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಅವರ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳು ಹಾಗೂ ಪೂಜಾ ಪರಿಕರಗಳನ್ನು ಇಟ್ಟುಕೊಂಡಿದ್ದು, ಮನೆಯಲ್ಲಿ ಯಾರೂ ವಾಸವಿಲ್ಲದೆ ನಿಯಮಿತವಾಗಿ ಪೂಜೆ ಮಾಡಿ ಬೀಗ ಹಾಕಲಾಗುತ್ತಿತ್ತು. ದಿನಾಂಕ 26-12-2025ರ ರಾತ್ರಿ ಅಪರಿಚಿತರು ಮನೆಯ ಮೇಲ್ಚಾವಣಿಯ ಹಂಚು ತೆಗದು ಒಳಪ್ರವೇಶಿಸಿ ಸುಮಾರು ರೂ.1 ಲಕ್ಷ ಮೌಲ್ಯದ ಪಸಪ್ಪ ದೈವದ ತಾಮ್ರದ ಮೂರ್ತಿ, ಮಂತ್ರದೇವತೆಯ ಬೆಳ್ಳಿಯ ಮೂರ್ತಿ, ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರದ ಮೂರ್ತಿ, ಬೆಳ್ಳಿಯ ಕಡ್ಸಲೆ (ಖಡ್ಗ), ತಾಮ್ರದ ಘಂಟೆಗಳು, ತಾಮ್ರದ ಚೆಂಬುಗಳು ಹಾಗೂ ಎಲ್‌ಇಡಿ ಟಿವಿಯನ್ನು ಕಳವು ಮಾಡಿದ್ದರು.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 170/2025 ಕಲಂ 331(4), 305(ಎ) ಬಿ.ಎನ್.ಎಸ್ ಅಡಿ ದಿನಾಂಕ 27-12-2025ರಂದು ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ವೇಳೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ವಾಜೀದ್ ಜೆ @ ವಾಜಿ (27), ತಂದೆ ಜಾಫರ್ ಖಾನ್, ಬಜಪೆ ಮೂಲದವರನ್ನು ಪೊಲೀಸರು ಬಂಧಿಸಿದರು.
ವಿಚಾರಣೆಯಲ್ಲಿ ಆರೋಪಿ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡು, ಕಳವು ಮಾಡಿದ ಹಿತ್ತಾಳೆ ಹಾಗೂ ತಾಮ್ರದ ಸಾಮಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಹಿನ್ನೆಲೆ ದಿನಾಂಕ 27-01-2026ರಂದು ಸಯ್ಯದ್ ಆಲಿ (40), ತಂದೆ ಕೆ. ವೀರನ್ ಕುಟ್ಟಿ ಅವರನ್ನು ಕೂಡ ಬಂಧಿಸಲಾಗಿದೆ.
ಆರೋಪಿತರಿಂದ ಸುಮಾರು ರೂ.1,95,000 ಮೌಲ್ಯದ ಬೆಳ್ಳಿಯ ಮಂತ್ರದೇವತೆಯ ಮೂರ್ತಿ, ಕಡ್ಸಲೆ, ಕೊಡೆ, ರೂ.2,750 ಮೌಲ್ಯದ ಹಿತ್ತಾಳೆ ಪೂಜಾ ಸಾಮಗ್ರಿ, ರೂ.300 ಮೌಲ್ಯದ ತಾಮ್ರದ ಸಾಮಗ್ರಿ, ರೂ.2,000 ಮೌಲ್ಯದ ಟಿವಿ ಮತ್ತು ಸೆಟ್‌ಟಾಪ್ ಬಾಕ್ಸ್, ಎರಡು ಮೊಬೈಲ್ ಫೋನ್‌ಗಳು ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಸುಮಾರು ರೂ.30,000 ಮೌಲ್ಯದ ಸ್ಕೂಟರ್ ಅನ್ನು ಮಹಜರು ಮೂಲಕ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಾಜೀದ್ ಜೆ @ ವಾಜಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಶೀಟ್ ಹಾಗೂ ಎಂ.ಒ.ಬಿ ತೆರೆಯಲಾಗಿದ್ದು, ಈತನ ಮೇಲೆ ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಕೊಲೆಯತ್ನ, ದರೋಡೆ, ದನ ಕಳ್ಳತನ, ಮನೆ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ದಸ್ತಗಿರಿ ವಾರಂಟ್ ಕೂಡ ಜಾರಿಯಾಗಿತ್ತು.
ಬಂಧಿತ ಆರೋಪಿಗಳನ್ನು ದಿನಾಂಕ 28-01-2026ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
