Home Mangalorean News Kannada News ಸುಲ್ತಾನ್ ಬತ್ತೇರಿ : ನದಿ ಒತ್ತುವರಿ ಕೂಡಲೇ ತೆರವುಗೊಳಿಸಲು ಉಸ್ತುವಾರಿ ಸಚಿವರ ಸೂಚನೆ

ಸುಲ್ತಾನ್ ಬತ್ತೇರಿ : ನದಿ ಒತ್ತುವರಿ ಕೂಡಲೇ ತೆರವುಗೊಳಿಸಲು ಉಸ್ತುವಾರಿ ಸಚಿವರ ಸೂಚನೆ

Spread the love

ಸುಲ್ತಾನ್ ಬತ್ತೇರಿ : ನದಿ ಒತ್ತುವರಿ ಕೂಡಲೇ ತೆರವುಗೊಳಿಸಲು ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು:  ನಗರದ ಸುಲ್ತಾನ್ ಬತ್ತೇರಿ ಪರಿಸರದಲ್ಲಿ ನದಿ ತೀರಕ್ಕೆ ಕಟ್ಟಡ ತ್ಯಾಜ್ಯಗಳನ್ನು ಹಾಕಿ ನದಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ನಂದಿನಿ, ಫಲ್ಗುಣಿ ಮತ್ತು ಶಾಂಭವಿ ಕಲುಷಿತಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಲ್ತಾನ್ ಬತ್ತೇರಿಯಲ್ಲಿ ನದಿ ತೀರಕ್ಕೆ ಕಟ್ಟಡಗಳ ತ್ಯಾಜ್ಯಗಳನ್ನು ತಂದು ಸುರಿದು ಅಕ್ರಮವಾಗಿ ಒತ್ತುವರಿ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ನಿಟ್ಟಿನಲ್ಲಿ ತಕ್ಷಣವೇ ಕ್ರಮಕೈಗೊಂಡು ನದಿಯ ಮೂಲ ಜಾಗವನ್ನು ನದಿಗೆ ಸೇರುವಂತೆ ಮಾಡಿ, ನದಿ ವ್ಯಾಪ್ತಿಯನ್ನು ಮೂಲ ಸ್ವರೂಪಕ್ಕೆ ತರಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಕಟ್ಟಡ ತ್ಯಾಜ್ಯ ಸುರಿದು ನದಿ ತೀರ ಅಕ್ರಮಿಸಿದವರ ವಿರುದ್ಧ ಈಗಾಗಲೇ ಪೆÇೀಲಿಸ್ ಕೇಸು ದಾಖಲಿಸಲಾಗಿದೆ ಎಂದು ತಿಳಿಸಿದರು.
ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಸಂಬಂಧಿಸಿದವರಿಗೆ ವರದಿ ನೀಡಲಾಗಿದೆ ಎಂದು ಪರಿಸರ ಮಂಡಳಿ ಹಾಗೂ ಸಿ.ಆರ್.ಝಡ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸುರತ್ಕಲ್ ಮುಕ್ಕ ನಂದಿನಿ ನದಿಯಲ್ಲಿ ಈಗಾಗಲೇ ಮಾಲಿನ್ಯ ನಿಯಂತ್ರಿಸಲಾಗಿದೆ. ಮಹಾನಗರಪಾಲಿಕೆ ತ್ಯಾಜ್ಯ ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಲಾಗಿದೆ. ಖಾಸಗಿ ಸಂಸ್ಥೆಗಳಿಂದ ಬರುವ ಕಲುಷಿತ ನೀರು ಕಡಿಮೆಯಗಿದೆ ಎಂದು ಮಾಲಿನ್ಯ ಮಂಡಳಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೂಳೂರು ನದಿಗೆ ಸೇರಿ ಮಾಲಿನ್ಯವಾಗುತ್ತಿರುವ ಸಾರ್ವಜನಿಕರ ದೂರಿನ ಕುರಿತು ಸಚಿವರು ಮಾಹಿತಿ ಕೇಳಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆಗೆÉ ಶುದ್ಧೀಕರಣ ಘಟಕ ನಿರ್ಮಿಸಲು 39 ಕೋ. ರೂ. ವೆಚ್ಚದ ಟೆಂಡರ್ ಆಗಿದೆ. ಇದಕ್ಕೆ ಜಮೀನು ಕೂಡ ಕಾದಿರಿಸಲಾಗಿದೆ ಎಂದು ಕೆ.ಐ.ಎ.ಡಿ.ಬಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿರುವ ಅಂಗರಗುಂಡಿ ಮತ್ತು ಕುಡುಂಬೂರು ಜನವಸತಿ ಪ್ರದೇಶಗಳಲ್ಲಿ ಒಳಚರಂಡಿ (ಯುಜಿಡಿ) ಸೌಲಭ್ಯ ಒದಗಿಸಿ, ಅಲ್ಲಿನ ತ್ಯಾಜ್ಯವನ್ನು ಈಗಾಗಲೇ ತೋಕೂರು ಬಗ್ಗುಂಡಿ ಸಮೀಪ ನಿರ್ಮಿಸಿರುವ ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version