ಸುಳ್ಳು ಆರೋಪ ಹೊರಿಸಿ ಕ್ರೈಸ್ತ ಸನ್ಯಾಸಿನಿಯರ ಬಂಧನ ವಿರೋಧಿಸಿ ಪ್ರತಿಭಟನಾ ಪ್ರದರ್ಶನ
ಸುಳ್ಳು ಆರೋಪ ಹೊರಿಸಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿ ಜೈಲುಗಟ್ಟಿದ ಚತ್ತೀಸ್ ಗಡ್ ರಾಜ್ಯ ಸರಕಾರದ ಫ್ಯಾಸಿಸ್ಟ್ ರಾಜಕಾರಣವನ್ನು ವಿರೋಧಿಸಿ ಹಾಗೂ ಕ್ರೈಸ್ತ ಸನ್ಯಾಸಿನಿಯರನ್ನು ಬಿಡುಗಡೆಗೊಳಿಸಬೇಕು,ಅವರ ಮೇಲಿನ ಸುಳ್ಳು ಮೊಕದ್ದಮೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ನೇತ್ರತ್ವದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ನಾಯಕಿ ಈಶ್ವರೀ ಬೆಳ್ತಂಗಡಿಯವರು ಮಾತನಾಡುತ್ತಾ, ಮಹಿಳೆಯರನ್ನು ಮಾತೆ ಎನ್ನುತ್ತಾ, ಹೆಣ್ಣು ಮಕ್ಕಳ ಬಗ್ಗೆ ಬಣ್ಣಬಣ್ಣದ ಘೋಷಣೆಗಳನ್ನು ನೀಡುವ ಕೇಂದ್ರದ ನರೇಂದ್ರ ಮೋದಿ ಸರಕಾರವು ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲವಾಗಿದೆ.ಪ್ರೀತಿ ಹಾಗೂ ಸೇವೆಯ ಪ್ರತೀಕವಾದ ಕ್ರೈಸ್ತ ಸನ್ಯಾಸಿನಿಯರ ಕಾರ್ಯವನ್ನು ಇಡೀ ಸಮಾಜವೇ ಗುರುತಿಸಿ ಕೊಂಡಾಡುವಾಗ ಸಂಘ ಪರಿವಾರದ ಗೂಂಡಾಗಳು ಅವರ ಮೇಲೆ ಇಲ್ಲಸಲ್ಲದ ಆರೋಪವನ್ನು ಹೊರಿಸಿ ಜೈಲಿಗಟ್ಟಿರುವ ಘಟನೆ ಅತ್ಯಂತ ಅಮಾನವೀಯವಾಗಿದೆ. ಛತ್ತೀಸ್ ಗಡದ ಬಿಜೆಪಿ ಸರ್ಕಾರ ಕ್ರೈಸ್ತ ಸನ್ಯಾಸಿನಿಯರ ಬಗ್ಗೆ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗಟ್ಟಿದರೆ ಕೇರಳ ರಾಜ್ಯದ ಬಿಜೆಪಿ ನಾಯಕರು ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ತಮ್ಮ ದ್ವಂದ್ವ ನೀತಿಯನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ನಾಯಕರಾದ ಕಿರಣಪ್ರಭಾ,ಜಯಂತಿ ಶೆಟ್ಟಿ ಹಾಗೂ ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷರಾದ ಮಂಜುಳಾ ನಾಯಕ್ ರವರು ಮಾತನಾಡಿ, ಮತಾಂತರದ ಹೆಸರಿನಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯನ್ನಾಗಿಸಿ ನಡೆಸುತ್ತಿರುವ ಧಾಳಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆಪಾದಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಪ್ರಮೀಳಾ ಶಕ್ತಿನಗರ,ಪ್ಲೇವಿಕ್ರಾಸ್ತಾ ಅತ್ತಾವರ,ಅಸುಂತ ಡಿಸೋಜ, ಶಮೀಮಾ ಬಾನು,ಉಷಾ ಫೆರ್ನಾಂಡೀಸ್,ಝೀಟಾ ಮೋರಸ್, ಭಾರತಿ ಬೋಳಾರ,ಜಯಲಕ್ಷ್ಮಿ, ಲತಾ ಲಕ್ಷ್ಮಣ್, ಯೋಗಿತಾ ಉಳ್ಳಾಲ, ವಾಯಿಲೆಟ್,ತುಳಸಿ,ಮರ್ಲಿನ್ ರೇಗೋ,ವಿದ್ಯಾ ಶೆಣೈ, ರಶ್ಮಿ ವಾಮಂಜೂರು,ಅರ್ಚನಾ ರಾಮಚಂದ್ರ,ನ್ಯಾನ್ಸಿ ಫೆರ್ನಾಂಡೀಸ್, ಆಶಾ ಬೋಳೂರು, ಸೌಮ್ಯ ಪಂಜಿಮೊಗರು,ಮಂಜುಳಾ ವಾಮಂಜೂರು ಮುಂತಾದವರು ಭಾಗವಹಿಸಿದ್ದರು