ಸೇನೆಗೆ ಪಕ್ಷದ ಬಣ್ಣ ಬಳಿಯಬೇಡಿ, ಭಾರತೀಯ ಸೇನೆ 140 ಕೋಟಿ ಜನರ ಹೆಮ್ಮೆ: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್
ಮಂಗಳೂರು: ಭಾರತೀಯ ಸೇನೆ ದೇಶದ 140 ಕೋಟಿ ಜನರ ಭದ್ರತೆ ಮತ್ತು ಗೌರವವನ್ನು ಕಾಪಾಡುತ್ತಿರುವ ಅತ್ಯಂತ ಪವಿತ್ರ ಸಂಸ್ಥೆಯಾಗಿದ್ದು, ಸೇನೆಯನ್ನು ಯಾವುದೇ ಒಂದು ರಾಜಕೀಯ ಪಕ್ಷದ ಚಿಂತನೆ ಅಥವಾ ಕಾರ್ಯಕರ್ತರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಹೇಳಿದ್ದಾರೆ.
ಮಂಗಳೂರಿನ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಭಾರತೀಯ ಸೇನೆಯ ಯೋಧರ ಚಿಂತನೆ ಹಾಗೂ ಬಿಜೆಪಿ ಕಾರ್ಯಕರ್ತರ ಚಿಂತನೆ “Nation First” ಎಂಬ ನೆಲೆಯಲ್ಲಿ ಒಂದೇ ರೀತಿಯಾಗಿದೆ ಎಂಬ ಅರ್ಥದಲ್ಲಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸೇನೆಯ ವಿಚಾರದಲ್ಲಿ ರಾಜಕೀಯವನ್ನು ಬೆರೆಸಬಾರದು ಎಂದು ಹೇಳಿದ್ದಾರೆ.
“ಭಾರತೀಯ ಸೇನೆ ಯಾವುದೇ ಒಂದು ಪಕ್ಷದ ಸೇನೆಯಲ್ಲ. ಅದು ಪ್ರತಿಯೊಬ್ಬ ಭಾರತೀಯನ ಸೇನೆ. ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುವ ನಮ್ಮ ಯೋಧರು ಯಾವುದೇ ಪಕ್ಷದ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಅವರು ಭಾರತದ ಸಂವಿಧಾನ, ರಾಷ್ಟ್ರ ಮತ್ತು ಜನರ ರಕ್ಷಣೆಗೆ ತಮ್ಮ ಕರ್ತವ್ಯವನ್ನು ಅರ್ಪಿಸಿಕೊಂಡಿರುತ್ತಾರೆ,” ಎಂದು ಇಬ್ರಾಹಿಂ ನವಾಝ್ ಹೇಳಿದ್ದಾರೆ.
ಭಾರತೀಯ ಯೋಧರು ದೇಶದ ಪ್ರತಿಯೊಬ್ಬ ನಾಗರಿಕನನ್ನೂ ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ. ಧರ್ಮ, ಜಾತಿ, ಭಾಷೆ ಅಥವಾ ರಾಜಕೀಯ ಪಕ್ಷದ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನ ಸುರಕ್ಷತೆಯೇ ಅವರ ಮೊದಲ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಸದರು ಯುವಜನರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ರಾಜಕೀಯ ದೃಷ್ಟಿಕೋನದಿಂದ ಬಿಂಬಿಸುವ ಬದಲು, ಭಾರತೀಯ ಸೇನೆಯ ನೈಜ ಸೇವೆ, ತ್ಯಾಗ ಮತ್ತು ಶೌರ್ಯವನ್ನು ಪಕ್ಷಾತೀತವಾಗಿ ಗೌರವಿಸುವ ಸಂದೇಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಭಾರತೀಯ ಸೇನೆಯ ಗೌರವ ಮತ್ತು ಘನತೆಯನ್ನು ರಾಜಕೀಯ ಭಿನ್ನಾಭಿಪ್ರಾಯಗಳಿಂದ ದೂರವಿಟ್ಟು, ದೇಶದ ಪ್ರತಿಯೊಬ್ಬ ನಾಗರಿಕರೂ ಒಗ್ಗಟ್ಟಿನಿಂದ ಗೌರವಿಸಬೇಕು ಎಂದು ಇಬ್ರಾಹಿಂ ನವಾಝ್ ತಿಳಿಸಿದ್ದಾರೆ.
