ಸ್ಥಗಿತಗೊಂಡಿದ್ದ ಗಂಗೊಳ್ಳಿ ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತೆ ಶೀಘ್ರ ಆರಂಭ – ಸೈಯ್ಯದ್ ಫುರ್ಖಾನ್ ಯಾಶಿನ್
ಕುಂದಾಪುರ: ಕೊರೋನಾ ಸಂದರ್ಭದಲ್ಲಿ ಕುಂದಾಪುರದಿಂದ ಗಂಗೊಳ್ಳಿ ಭಾಗಕ್ಕೆ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ಸ್ಥಗಿತಗೊಂಡಿದ್ದು ಮತ್ತೆ ಕೆಲವೇ ದಿನಗಳಲ್ಲಿ ಸಂಚಾರ ಪುನರಾರಂಭಗೊಳ್ಳುವುದಾಗಿ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸೈಯ್ಯದ್ ಫುರ್ಖಾನ್ ಯಾಶಿನ್ ತಿಳಿಸಿದ್ದಾರೆ.
ಮಂಗಳವಾರ ಉಡುಪಿ ಜಿಲ್ಲೆಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ಅಧ್ಯಕ್ಷತೆಯಲ್ಲಿ ಜರುಗಿದ್ದು ಈ ವೇಳೆ ಸಭೆಯಲ್ಲಿ ಬಸ್ಸು ಸ್ಥಗಿತಗೊಂಡಿರುವ ಕುರಿತು ಸೈಯ್ಯದ್ ಫುರ್ಖಾನ್ ಯಾಶಿನ್ ಅವರು ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಭಾಗದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಬಸ್ಸಿನಿಂದ ಉಪಯೋಗವಾಗುತ್ತಿದ್ದು ಸ್ಥಗಿತಗೊಂಡ ಪರಿಣಾಮ ಸಮಸ್ಯೆಯಾಗಿದ್ದು ಕೂಡಲೇ ಬಸ್ಸು ಸಂಚಾರ ಪುನರಾರಂಭಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆ ಎಸ್ ಆರ್ ಟಿ ಅಧಿಕಾರಿಗಳು ಕೋವಿಡ್ ಸಮಯದಲ್ಲಿ ಕೆಲವೊಂದು ಕಾರಣಗಳಿಗಾಗಿ ಬಸ್ಸು ಸ್ಥಗಿತಗೊಂಡಿದ್ದು ಈಗಾಗಲೇ ಮತ್ತೆ ಪುನಃ ಆರಂಭಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು ಶೀಘ್ರದಲ್ಲಿಯೇ ಮತ್ತೆ ಬಸ್ಸು ಸಂಚಾರ ಆರಂಭವಾಗಿಲಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು. ಅಲ್ಲದೆ ಸರಕಾರ ಮಂಗಳೂರು ವಿಭಾಗಕ್ಕೆ ನೂರು ಹೊಸದಾಗಿ ಬಸ್ಗಳನ್ನು ಶೀಘ್ರದಲ್ಲಿಯೇ ನೀಡಲಿದ್ದು, ಅವುಗಳಲ್ಲಿ 40 ಬಸ್ಸುಗಳು ಜಿಲ್ಲೆಗೆ ಆಗಮಿಸಲಿದೆ. ಅಗತ್ಯವಿರುವ ಕಡೆ ಇವುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅವರು ಸಭೆಗೆ ಮಾಹಿತಿ ನೀಡಿದರು.