ಸ್ವಚ್ಚ ಸಾಗರ – ಸುರಕ್ಷಿತ ಸಾಗರ: ಕಾಪು ಬೀಚ್ನಲ್ಲಿ ಸ್ವಚ್ಚತಾ ಕಾರ್ಯಕ್ರಮ
ಕಾಪು: ಉಡುಪಿ ಜಿಲ್ಲಾಡಳಿತ, ಕಾಪು ಪುರಸಭೆ, ಸ್ವಚ್ಚಂ ವಾಟರ್ ಅಡ್ವೆಂಚರ್ ಮಣಿಪಾಲ ಎಂಐಟಿ, ಎನ್ಎಸ್ಎಸ್ ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಸ್ವಚ್ಚ ಸಾಗರ – ಸುರಕ್ಷಿತ ಸಾಗರ ಯೋಜನೆಯಡಿ ಕಾಪು ಬೀಚ್ನಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 7 ಗಂಟೆಯಿಂದಲೇ ವಿದ್ಯಾರ್ಥಿ ಸ್ವಯಂಸೇವಕರು ಬೀಚ್ ಸುತ್ತಮುತ್ತಲಿನ ಪ್ಲಾಸ್ಟಿಕ್, ಬಾಟಲಿ ಹಾಗೂ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಪುರಸಭೆಯ ವಾಹನಗಳಿಗೆ ತುಂಬಿಸಿದರು.
ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿದ್ಯಾರ್ಥಿಗಳ ಶ್ರಮದಾನವನ್ನು ಶ್ಲಾಘಿಸಿದರು. “ಜಾಂಬವನು ಹನುಮಂತನಲ್ಲಿ ಆತ್ಮವಿಶ್ವಾಸ ಮೂಡಿಸಿದಂತೆ, ಇಂದಿನ ವಿದ್ಯಾರ್ಥಿಗಳು ಹನುಮಂತನ ಧೈರ್ಯದಿಂದ ದೊಡ್ಡ ಮಟ್ಟದ ಸ್ವಚ್ಚತಾ ಕಾರ್ಯ ಮಾಡಿ ತೋರಿಸಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀಚ್ ಸ್ವಚ್ಚತೆಗೆ ಒತ್ತುಕೊಟ್ಟಿರುವ ಸ್ವಚ್ಚಂ ಸಂಸ್ಥೆಯ ಕಾರ್ಯವೈಖರಿಗೂ ಮೆಚ್ಚುಗೆ ವ್ಯಕ್ತವಾಯಿತು. ಬೀಚ್ ಸ್ವಚ್ಚತಾ ಕಾರ್ಮಿಕರು ಹಾಗೂ ಪುರಸಭೆಯ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರ ಅಧಿಕಾರಿ ಅಮೃತಾ, ಸ್ವಚ್ಚಂ ಸಂಸ್ಥೆಯ ತಾರನಾಥ ಪೂಜಾರಿ, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸದಸ್ಯರು ನಿತಿನ್ ಕುಮಾರ್, ಮೋಹಿನಿ ಶೆಟ್ಟಿ, ಶೈಲೇಶ್ ಹಾಗೂ ಮಣಿಪಾಲ ಪ್ರಾಧ್ಯಾಪಕ ನಯಾಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಿವಾಕರ್ ಕಡೆಕಾರ್ ನಿರೂಪಿಸಿದರು.