Home Mangalorean News Kannada News ಹಣಕಾಸು ವಿಚಾರದ ಗಲಾಟೆಯಲ್ಲಿ ಸಹೋದ್ಯೋಗಿಯನ್ನು ಇರಿದು ಹತ್ಯೆ : ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಹಣಕಾಸು ವಿಚಾರದ ಗಲಾಟೆಯಲ್ಲಿ ಸಹೋದ್ಯೋಗಿಯನ್ನು ಇರಿದು ಹತ್ಯೆ : ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

Spread the love

ಹಣಕಾಸು ವಿಚಾರದ ಗಲಾಟೆಯಲ್ಲಿ ಸಹೋದ್ಯೋಗಿಯನ್ನು ಇರಿದು ಹತ್ಯೆ : ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಟ್ರೀ ಪಾರ್ಕ್ ಸಮೀಪದ ಮಂಗಳಾ ಬೋಟ್ ಯಾರ್ಡ್ನಲ್ಲಿ 2023 ಡಿಸೆಂಬರ್ 10ರಂದು ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.

ಅಂದು ಪಣಂಬೂರು ಗ್ರಾಮದ ಮೀನಗಾರಿಕಾ ಬೋಟ್ಗಳನ್ನು ತಯಾರಿಸುವ ಹಾಗೂ ದುರಸ್ತಿ ಮಾಡುವ ಮಂಗಳಾ ಬೋಟ್ ಯಾರ್ಡ್ನಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದ ಬಿನು.ಜಿ ಮತ್ತು ಮರದ ಕೆಲಸ ಮಾಡುತ್ತಿದ್ದ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಅವರುಗಳು ಕೆಲಸದ ನಂತರ ತಂಗಿದ್ದ ಶೆಡ್ನಲ್ಲಿ ಹಣಕಾಸಿನ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಅವರು ಬಿನುವಿನ ಎದೆಯ ಭಾಗಕ್ಕೆ ಕಬ್ಬಿಣದ ಉಳಿಯಿಂದ ಇರಿದು ಹತ್ಯೆ ಮಾಡಿದ್ದಾಗಿ ಆರೋಪಿಸಲಾಗಿದೆ.

ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.102/2023ರಂತೆ ಭಾರತೀಯ ದಂಡ ಸಂಹಿತೆ ಕಲಂ 302ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.

ನ್ಯಾಯಾಲಯದಲ್ಲಿ ಎಸ್.ಸಿ. ನಂ.58/2024ರಂತೆ ವಿಚಾರಣೆ ನಡೆದು, ಆರೋಪಿಯಾದ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಕಣ್ಣೂರು ಜಿಲ್ಲೆ, ಕೇರಳ ರಾಜ್ಯ — ಇವರ ಅಪರಾಧ ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಕಲಂ 302 ಐಪಿಸಿ ಅಡಿಯಲ್ಲಿ 5 ವರ್ಷ ಸಾದಾ ಕಾರಾವಾಸ ಹಾಗೂ ಕಲಂ 304(2) ಐಪಿಸಿ ಅಡಿಯಲ್ಲಿ ರೂ.25,000 ದಂಡ ವಿಧಿಸಿದೆ.

ಆರೋಪಿ ಜಾಮೀನು ಪಡೆಯದೆ ಸುಮಾರು 3 ವರ್ಷ 2 ತಿಂಗಳುಗಳ ಕಾಲ ವಿಚಾರಣಾ ಬಂಧಿಯಾಗಿ ಜೈಲಿನಲ್ಲಿ ಕಳೆದಿದ್ದನು. ವಿಚಾರಣೆ ಬಳಿಕ ಅಪರಾಧ ಸಾಬೀತಾಗಿ ಶಿಕ್ಷೆ ಪ್ರಕಟಗೊಂಡಿದೆ.

ಪ್ರಕರಣದ ಪ್ರಾಥಮಿಕ ತನಿಖೆಯನ್ನು ಆಗಿನ ಪಣಂಬೂರು ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ (ಪ್ರಸ್ತುತ ಬಜಪೆ ಪೊಲೀಸ್ ಠಾಣೆ) ಭಾಗಶಃ ನಡೆಸಿದ್ದು, ನಂತರ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಎಂ. ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.


Spread the love

Exit mobile version