Home Mangalorean News Kannada News ಹನಿ ಟ್ರ್ಯಾಪ್ ಮೂಲಕ ಜ್ಯೋತಿಷಿಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಇಬ್ಬರ ಬಂಧನ

ಹನಿ ಟ್ರ್ಯಾಪ್ ಮೂಲಕ ಜ್ಯೋತಿಷಿಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಇಬ್ಬರ ಬಂಧನ

Spread the love

ಹನಿ ಟ್ರ್ಯಾಪ್ ಮೂಲಕ ಜ್ಯೋತಿಷಿಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಇಬ್ಬರ ಬಂಧನ

ಉಡುಪಿ: ಜಿಲ್ಲೆಯಲ್ಲಿ ಬಹುಕಾಲದಿಂದ ಕಾರ್ಯಾಚರಿಸುತ್ತಿದ್ದ ಬ್ಲಾಕ್‌ಮೇಲ್ ನಿರತ ವೃತ್ತಿಪರರ ತಂಡವೊಂದನ್ನು ಭೇದಿಸಿರುವ ಉಡುಪಿ ಪೊಲೀಸರು ಅದರ ಇಬ್ಬರು ಸದಸ್ಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯರನ್ನು ಒಳಗೊಂಡ ಈ ತಂಡ ಜ್ಯೋತಿಷಿಗಳು, ವೈದ್ಯರು ಮುಂತಾದವರ ಬಳಿ ಬಂದು ನಯವಾದ ಮಾತುಗಳನ್ನಾಡಿ ಇವರು ತಂಡ ಕಳುಹಿಸಿದ ಮಹಿಳೆಯರ ಮೈಮುಟ್ಟುವಂತೆ, ಪರೀಕ್ಷಿಸುವಂತೆ ಮಾಡಿ ಅದನ್ನು ರಹಸ್ಯವಾಗಿ ಚಿತ್ರೀಕರಿಸಿ ಬಳಿಕ ಅದನ್ನು ಬಳಸಿ ಸಂಬಂಧಿತರನ್ನು ಬೆದರಿಸಿ ಹಣ ಕೀಳುವುದು ಈ ತಂಡ ಕಾರ್ಯ ಸೂಚಿಯಾಗಿದೆ.

ಕಳೆದ ಜು.20ರಂದು ಹೆಬ್ರಿ ಅರ್ಧನಾರೀಶ್ವರ ದೇವಸ್ಥಾನದ ಅರ್ಚಕನಾಗಿದ್ದು ಜೊತೆಗೆ ಜ್ಯೋತಿಷ್ಯ ಹೇಳುವ ವೃತ್ತಿಯ ರಮೇಶ್ ಭಟ್ ಎಂಬವರು ನೀಡಿದ ದೂರು ಈ ತಂಡದ ಕಾರ್ಯಾಚರಣೆಯನ್ನು ಭೇದಿಸುವಲ್ಲಿ ಪೊಲೀಸರಿಗೆ ನೆರವಾಯಿತು. ಜು.19ರಂದು ಸಂಜೆ ಆರು ಗಂಟೆಗೆ ತಾನು ದೇವಸ್ಥಾನದ ಬಳಿ ಇದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಮೊಬೈಲ್ ವೀಡಿಯೊ ತೋರಿಸಿ ಅದರಲ್ಲಿ ರಮೇಶ ಭಟ್ ಅವರು ಮಹಿಳೆಯ ಮೈಮುಟ್ಟಿ ಪರೀಕ್ಷಿಸುವ ದೃಶ್ಯವಿದ್ದು ಇದನ್ನು ಮೀಡಿಯಾಗಳಿಗೆ ಕೊಟ್ಟು ನಿನ್ನ ಮರ್ಯಾದೆಯನ್ನು ತೆಗೆಯುತ್ತೇನೆ ಇಲ್ಲದಿದ್ದಲ್ಲಿ ನಮಗೆ 40 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.

ಮರುದಿನ ಸಂಜೆ ಒಳಗೆ 40 ಲಕ್ಷ ರೂ. ನೀಡಬೇಕು ಎಂದು ಬೆದರಿಕೆ ಹಾಕಿದ್ದು, ಇದರಿಂದ ಹೆದರಿದ ತಾನು 80,000 ರೂ.ಗಳನ್ನು ನೀಡಿರುವುದಾಗಿ ತಿಳಿಸಿದ್ದರು. ಕೂಡಲೇ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್‌ರ ಮಾರ್ಗದರ್ಶನದಲ್ಲಿ ಕಾರ್ಕಳ ಸಿಪಿಐ ಹಾಲಮೂರ್ತಿ ರಾವ್ ಮತ್ತು ಹೆಬ್ರಿ ಪಿಎಸ್‌ಐ ಮಹಾಬಲ ಶೆಟ್ಟಿ ತನಿಖೆ ಕೈಗೊಂಡು ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿ ಹೆಬ್ರಿ ತಾಲೂಕು ಬೇಳಿಂಜೆ ಗ್ರಾಮದ ಸುಮಾ ಯಾನೆ ಸುನಂದಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣದಲ್ಲಿ ತಾನು ಭಾಗಿಯಾಗಿದ್ದನ್ನು ಒಪ್ಪಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.

ತನಗೆ ದೂರದ ಸಂಬಂಧಿ ಕುಂದಾಪುರ ತಾಲೂಕು ಜನ್ನಾಡಿಯ ಕಿರಣ್ ಯಾನೆ ಶಶಾಂಕ್ ಶೆಟ್ಟಿ(26), ಆತನ ಪತ್ನಿ ಲಕ್ಷ್ಮೀ (26) ಹಾಗೂ ಕುಂದಾಪುರ ತಾಲೂಕು ಕರ್ಕಿಯ ಮಂಜುನಾಥ ಎಂಬ ನಾಲ್ಕು ಜನ ಸೇರಿ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದೂ ಅವರು ತಿಳಿಸಿದ್ದಾರೆ. ಆರೋಪಿ ಸುಮಾ ನೀಡಿದ ಮಾಹಿತಿಯಂತೆ ಮುಖ್ಯ ಆರೋಪಿ ಕಿರಣ್ ಯಾನೆ ಶಶಾಂಕ್ ಶೆಟ್ಟಿಯನ್ನು ಇಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಆತ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದು ತಾನೂ ಸೇರಿದಂತೆ ತನಗೆ ಸೇರಿದ ಡಸ್ಟರ್ ಕಾರಿನಲ್ಲಿ ಸುಮಾ, ಲಕ್ಷ್ಮೀ ಹಾಗೂ ಮಂಜುನಾಥ ಸೇರಿ ಹೆಬ್ರಿ ಗ್ರಾಮದ ರಮೇಶ್ ಭಟ್ ಇವರಿಂದ ಹಣ ವಸೂಲು ಮಾಡಲು ಈ ಯೋಜನೆ ರೂಪಿಸಿದ್ದಾಗಿ ತಿಳಿಸಿದ್ದಾನೆ. ಇದಕ್ಕಾಗಿ ಭಟ್ಟರು ಹೆಂಗಸಿನ ಮೈಮುಟ್ಟುವ ದೃಶ್ಯವನ್ನು ವೀಡಿಯೊ ಮಾಡಿ ನಂತರ ಅವರಿಂದ ಹಣ ಕೀಳಲು ತಾವು ನಾಲ್ವರು ಸೇರಿ ಒಳಸಂಚು ರೂಪಿಸಿದ್ದಾಗಿ ತಿಳಿಸಿದ್ದಾನೆ.

ಯೋಜನೆಯಂತೆ ಭಟ್ಟರು ಸುಮಾ ಅವರ ಮೈಮುಟ್ಟುವಂತೆ ಮಾಡಿದ್ದು ಅದನ್ನು ವ್ಯಾನಿಟಿ ಬ್ಯಾಗಿನಲ್ಲಿರಿಸಿದ ರಹಸ್ಯ ಕೆಮರಾದಲ್ಲಿ ಚಿತ್ರೀಕರಿಸಿ ಮರುದಿನ ಬಂದು ರಮೇಶ್ ಭಟ್ಟರಿಗೆ ವೀಡಿಯೊ ತೋರಿಸಿ ಬೆದರಿಕೆ ಹಾಕಿ 40 ಲಕ್ಷ ಹಣ ಕೇಳಿದ್ದು ಅವರು ಹೆದರಿ 80 ಸಾವಿರ ನೀಡಿದ್ದು, ಉಳಿದ ಹಣಕ್ಕೆ ನಾಳೆ ಬರುವುದಾಗಿ ಬೆದರಿಕೆ ಒಡ್ಡಿ ಹೋಗಿರುವುದಾಗಿ ಆರೋಪಿಗಳು ಒಪ್ಪಿಕೊಂಡರು.

ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಗ್ಯಾಂಗಿನ ಆರೋಪಿಗಳು ಇದೇ ರೀತಿಯಲ್ಲಿ ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ವೈದ್ಯರೊಬ್ಬರಿಗೆ ಇದೇ ರೀತಿ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿರುವ ಹಾಗೂ ಗೋಳಿಯಂಗಡಿಯಲ್ಲಿ ವೈದ್ಯರೊಬ್ಬರಿಗೆ ಇದೇ ರೀತಿ ಮಾಡುವ ಯೋಜನೆ ರೂಪಿಸಿರುವುನ್ನು ಅವರು ಬಹಿರಂಗ ಪಡಿಸಿದರು.

ಇದಲ್ಲದೇ ಕುಂದಾಪುರ ತಾಲೂಕಿನ ಜನ್ನಾಡಿಯ ಉದ್ಯಮಿಯೊಬ್ಬರಿಗೆ ಹಾಗೂ ಕುಂದಾಪುರದ ಹೊಸಂಗಡಿಯ ಜ್ಯೋತಿಷ್ಯರೊಬ್ಬರ ಹತ್ತಿರ ಹೋಗಿ ಅವರಲ್ಲಿ ಸಹ ವಿಶ್ವಾಸ ಗಳಿಸಿ ಮೈಮುಟ್ಟುವ ದೃಶ್ಯಗಳನ್ನು ಮೊಬೈಲ್‌ನಿಂದ ಸೆರೆ ಹಿಡಿದು ಅವರಿಗೆ ಬ್ಲಾಕ್ ಮೇಲ್ ಮಾಡಿ ಉದ್ಯಮಿದಾರರಿಂದ 1,50,000 ರೂ. ಹಾಗೂ ಜ್ಯೋತಿಷ್ಯ ಹೇಳುವ ಭಟ್ಟರಿಂದ 3,00,000 ರೂ. ಹಣವನ್ನು ಪಡೆದು ಸ್ವಂತಕ್ಕೆ ಖರ್ಚು ಮಾಡಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಡಸ್ಟರ್ ಕಾರು, ಹೊಸ ಮೋಟಾರ್ ಸೈಕಲ್- 1,26,000 ರೂ. ನಗದು, ಮೊಬೈಲ್ ಅಳವಡಿಸಿದ ವ್ಯಾನಿಟಿ ಬ್ಯಾಗ್, ಬೇರೆ ಬೇರೆ ಕಂಪೆನಿಯ ಒಟ್ಟು ಏಳು ಮೊಬೈಲ್‌ಗಳು, ಚಾಕು – 1, ತಲವಾರು -1 ಇವುಗಳನ್ನು ವಶಕ್ಕೆ ಪಡೆದುಕೊಂಡು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಬಂಧಿತ ಆರೋಪಿಗಳಾದ ಸುಮ ಹಾಗೂ ಕಿರಣ ಯಾನೆ ಶಶಾಂಕ್ ಶೆಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ರಾಜೇಶ್ ಕೊಕ್ಕರ್ಣೆ, ಪ್ರವೀಣ್ ಶೆಟ್ಟಿ, ಸುರೇಂದ್ರ ಶೆಟ್ಟಿ, ದಿನೇಶ್, ದಾಮೋದರ್, ಉಲ್ಲಾಸ್, ಹಾಲೇಶಪ್ಪ, ಜ್ಯೋತಿ, ಜಯಲಕ್ಷ್ಮೀ ಹಾಗೂ ಸತೀಶ್ ಭಾಗವಹಿಸಿರುತ್ತಾರೆ.


Spread the love

Exit mobile version