Home Mangalorean News Kannada News ಹಳ್ಳಿಗಳಲ್ಲಿ ಕೂಡ ಕನ್ನಡ ಅನ್ಯಭಾಷೆಯ ಹೊಡೆತದಿಂದ ಸೊರಗುತ್ತಿದೆ – ಪ್ರೊ.ಎಂ.ಎಲ್. ಸಾಮಗ

ಹಳ್ಳಿಗಳಲ್ಲಿ ಕೂಡ ಕನ್ನಡ ಅನ್ಯಭಾಷೆಯ ಹೊಡೆತದಿಂದ ಸೊರಗುತ್ತಿದೆ – ಪ್ರೊ.ಎಂ.ಎಲ್. ಸಾಮಗ

Spread the love

ಹಳ್ಳಿಗಳಲ್ಲಿ ಕೂಡ ಕನ್ನಡ ಅನ್ಯಭಾಷೆಯ ಹೊಡೆತದಿಂದ ಸೊರಗುತ್ತಿದೆ – ಪ್ರೊ.ಎಂ.ಎಲ್. ಸಾಮಗ

ಉಡುಪಿ: ಕರ್ನಾಟಕದ ನಗರಗಳಲ್ಲಿ ಮಾತ್ರವಲ್ಲದೆ, ಹಳ್ಳಿಗಳಲ್ಲೂ ಕನ್ನಡವು ಅನ್ಯಭಾಷೆಯ ಹೊಡೆತದಿಂದ ಸೊರಗುತ್ತಿದೆ. ಈ ಪ್ರಭಾವವನ್ನು ತಡೆಯದಿದ್ದರೆ ಕನ್ನಡ ಭಾಷೆಯೇ ಸಾವಿನ ಅಂಚಿಗೆ ತಲುಪಬಹುದು ಎಂದು ವಿದ್ವಾಂಸ ಪ್ರೊ.ಎಂ.ಎಲ್. ಸಾಮಗ ಕಳವಳ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲ್ಲೂಕು ಘಟಕದ ವತಿಯಿಂದ ಕೊಡವೂರಿನ ಮಹಾತೋಭಾರ ಶಂಕರನಾರಾಯಣ ದೇವಸ್ಥಾನದ ಕವಿ ಅರುಣಾಬ್ಬ ವೇದಿಕೆಯಲ್ಲಿ ಶನಿವಾರ ನಡೆದ ಉಡುಪಿ ತಾಲ್ಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರು ಯಾಕೆ ಆಂಗ್ಲಮಾಧ್ಯಮ ಶಾಲೆಗಳಿಗೆ ಮುಗಿಬೀಳುತ್ತಾರೆ. ಕೂಲಿ ಕಾರ್ಮಿಕರೂ ದುಡಿದ ಹಣವನ್ನು, ಮಕ್ಕಳ ವಿದ್ಯಾರ್ಜನೆ ಆಂಗ್ಲಮಾಧ್ಯಮದಲ್ಲೇ ಆಗಬೇಕೆಂದು ಹಣ ವ್ಯಯ ಮಾಡಲು ಮುಂದಾಗುತ್ತಿರುವುದನ್ನು ನಮ್ಮೂರಲ್ಲೇ ಕಾಣುತ್ತೇವೆ ಎಂದರು.

ಗೃಹ ಸಂಸ್ಕೃತಿಯ ಮೂಲಕ ಕನ್ನಡ ನಮ್ಮೊಳಗೆ ಆಂತರಿಕ ಪ್ರಚೋದನೆಯಾಗಬೇಕು. ಆಗ ಕನ್ನಡದ ಬಗ್ಗೆ ನಮ್ಮ ಅಸಡ್ಡೆ ಕಡಿಮೆಯಾಗಬಹುದು. ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ತಂತ್ರಜ್ಞಾನ ವಿಸ್ಮಯಕಾರಿಯಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಜಾಗತಿಕ ವಿದ್ಯಮಾನದ ಪ್ರಭಾವದಿಂದ ಕನ್ನಡ ಭಾಷೆಯ ಸ್ಥಿತಿಗತಿ ಆತಂಕವನ್ನು ಹೆಚ್ಚಿಸುತ್ತಿದೆ ಎಂದೂ ಅವರು ಹೇಳಿದರು.

ಹಲವಾರು ವರ್ಷಗಳಲ್ಲಿ ಯಕ್ಷಗಾನ ಸಾಹಿತ್ಯ ರಚನೆ ಮಾಡುವ ಕವಿಗಳು ಸಾಹಿತ್ಯಕ ಮೌಲ್ಯದ ಎಷ್ಟೋ ಕೃತಿಗಳನ್ನು ರಚಿಸಿದ್ದಾರೆ. ಹೆಚ್ಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಸರಿಯಾದ ಮನ್ನಣೆ ಕೊಟ್ಟಿಲ್ಲ ಎಂಬುದು ಹಲವು ವರ್ಷಗಳ ಕೂಗಾಗಿದೆ. ಯಕ್ಷಗಾನ ಪ್ರಸಂಗ ಸಾಹಿತ್ಯವನ್ನೂ ಕನ್ನಡ ಸಾಹಿತ್ಯವಾಹಿನಿಯ ಒಂದು ತೊರೆ ಎಂದು ಪರಿಗಣಿಸಬೇಕೆಂಬುದು ಇಲ್ಲಿನ ಯಕ್ಷಕವಿಗಳ ಬೇಡಿಕೆಯಾಗಿದೆ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಮರ್ಶಕ ಎಸ್.ಆರ್. ವಿಜಯಶಂಕರ್, ಇಂದಿನ ಕನ್ನಡದ ಅನೇಕ ಮುಖ್ಯ ಬರಹಗಾರರು ವಕೀಲರಾಗಿ, ವೈದ್ಯರಾಗಿ, ಎಂಜಿನಿಯರ್ ಆಗಿ ಅಧ್ಯಯನ ಮಾಡಿದವರು. ವಿಶ್ವವಿದ್ಯಾಲಯದಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ಕಾಲೇಜಿನಲ್ಲಿ ಸಾಹಿತ್ಯ ಪಾಠದ ಮೂಲಕ ರೂಪುಗೊಂಡ ಬರಹಗಾರರಿಗಿಂತ ಸ್ವ ಆಸಕ್ತಿಯಿಂದ ಸಾಹಿತ್ಯ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ ಸಮ್ಮೇಳನಗಳಲ್ಲಿ ಗಂಭೀರವಾದ ಸಾಹಿತ್ಯ ವಿಚಾರಗಳ ಬಗ್ಗೆ ಉಪನ್ಯಾಸ ಏರ್ಪಡಿಸುವ ಅಗತ್ಯ ಇದೆ ಎಂದೂ ಅವರು ಪ್ರತಿಪಾದಿಸಿದರು.

ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ಜಗತ್ತಿನಾದ್ಯಂತ ಸಾಕಷ್ಟು ಭಾಷೆಗಳು ಮಾತನಾಡುವವರಿಲ್ಲದೆ ನಾಶವಾಗಿವೆ. ಭಾಷೆಯ ಜೊತೆಗೆ ಜನರ ಸಂಸ್ಕೃತಿ ಕೂಡ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಅಗತ್ಯವಿದೆ ಎಂದರು.

ಕಸಾಪ ಉಡುಪಿ ತಾಲ್ಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶಾಂತರಾಜ ಐತಾಳ್, ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಾಹಿತಿ ಎಚ್.ಡುಂಡಿರಾಜ್, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಹರಿಶ್ಚಂದ್ರ, ಉಡುಪಿ ತಾಲ್ಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ನಗರಸಭೆ ಸದಸ್ಯ ವಿಜಯ್ ಕೊಡವೂರು, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್ ಉಪಸ್ಥಿತರಿದ್ದರು.

ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು ಸ್ವಾಗತಿಸಿದರು. ಕಸಾಪ ತಾಲ್ಲೂಕು ಘಟಕ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಮಹಿಳಾ ಪ್ರತಿನಿಧಿ ಪೂರ್ಣಿಮಾ ಕೊಡವೂರು ನಿರೂಪಿಸಿದರು.

ಧ್ವಜಾರೋಹಣವನ್ನು ಸಾಹಿತಿ ನಾರಾಯಣ ಮಡಿ ನೆರವೇರಿಸಿದರು. ಪರಿಷತ್ ಧ್ವಜಾರೋಹಣವನ್ನು ಲೇಖಕಿ ಮಾಧವಿ ಭಂಡಾರಿ ನೆರವೇರಿಸಿದರು. ಸಮ್ಮೇಳನನ್ನೂ ಮೊದಲು ಮೆರವಣಿಗೆ ನಡೆಯಿತು. ಆರೋಗ್ಯ ತಪಾಸಣೆ ಶಿಬಿರ ಕೂಡ ಹಮ್ಮಿಕೊಳ್ಳಲಾಗಿತ್ತು. ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಕಸಾಪ ಪೂರ್ವಾಧ್ಯಕ್ಷ ಗಣನಾಥ ಎಕ್ಕಾರು ನೆರವೇರಿಸಿದರು. ಹಾಸ್ಯ ಸಾಹಿತಿ ಸಂಧ್ಯಾ ಶೆಣೈ, ಹಫೀಜ್ ರೆಹಮಾನ್ ಭಾಗವಹಿಸಿದ್ದರು.

ನೃತ್ಯನಿಕೇತನ ಕೊಡವೂರು ತಂಡದ ಕಲಾವಿದರಿಂದ ನೃತ್ಯ ಸಿಂಚನ ನಡೆಯಿತು.


Spread the love

Exit mobile version