ಹೆದ್ದಾರಿ ಹೊಂಡಕ್ಕೆ ಬಲಿಯಾದ ಮಹಿಳೆಯ ಕುಟುಂಬಕ್ಕೆ ಗರಿಷ್ಠ ಪರಿಹಾರ ಒದಗಿಸಬೇಕು – ಮಾಜಿ ಮೇಯರ್ ಶಶಿಧರ ಹೆಗ್ಡೆ
ಮಂಗಳೂರು: ಕೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಹೊಂಡಕ್ಕೆ ಬಿದ್ದು ಮೃತಪಟ್ಟ ದ್ವಿಚಕ್ರ ಸವಾರೆ ಮಾಧವಿಯ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ ಹೆಗ್ಡೆ ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರಕರಣ ದಾಖಲಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ ಈ ಘಟನೆಗೆ ಸಂಸದರು ಮತ್ತು ಶಾಸಕರ ಮೌನ ಖಂಡನೀಯ,” ಎಂದರು.
ಹೆಗ್ಡೆ ಮುಂದುವರಿಸಿ, “ಜಿಲ್ಲೆಯ ಜೀವನಾಡಿಯಾದ ರಾಷ್ಟ್ರೀಯ ಹೆದ್ದಾರಿ 66 ಹೊಂಡಗಳಿಂದ ತುಂಬಿ ಅಪಾಯಕಾರಿಯಾಗುತ್ತಿದೆ. ನಿರಂತರ ಅಪಘಾತಗಳಿಂದ ಅನೇಕರು ಸಾವನ್ನಪ್ಪುತ್ತಿದ್ದಾರೆ. ಮನೆಬಿಟ್ಟು ಕೆಲಸಕ್ಕೆ ಹೊರಟವರು ಜೀವಂತವಾಗಿ ಮನೆಗೆ ವಾಪಸ್ಸಾಗುತ್ತಾರೆ ಎಂಬ ಖಚಿತತೆ ಇಲ್ಲದ ಸ್ಥಿತಿ ಬಂದಿದೆ,” ಎಂದು ವಿಷಾದಿಸಿದರು.
ಇತ್ತೀಚಿನ ಅಪಘಾತಗಳು
- ಸೆ.10ರಂದು ಕೂಳೂರಿನಲ್ಲಿ ಮಾಧವಿ ಹೊಂಡ ತಪ್ಪಿಸಲು ಹೋಗಿ ಬಿದ್ದು, ಮಿನಿ ಲಾರಿ ಹರಿದು ಮೃತಪಟ್ಟರು.
- ಸೆ.6ರಂದು ನಂತೂರು ಜಂಕ್ಷನ್ನಲ್ಲಿ ದ್ವಿಚಕ್ರ ಸವಾರರು ಹೊಂಡಕ್ಕೆ ಬಿದ್ದರೂ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪಾರಾದರು.
- ಮೂರು ತಿಂಗಳ ಹಿಂದೆ ಸುರತ್ಕಲ್ನ ಮಹಮ್ಮದ್ ಅಶ್ರಫ್ ಹೊಂಡಕ್ಕೆ ಬಿದ್ದು ಮೃತಪಟ್ಟರು.
- ಕೋಡಿಕಲ್ನಲ್ಲಿ ಯುವ ಇಂಜಿನಿಯರ್ ಕೆಲಸ ಸೇರಿದ ಮೊದಲ ದಿನವೇ ಸಾವಿಗೀಡಾದರು.
- ಮದುವೆ ನಿಗದಿಯಾಗಿದ್ದ ಕಾಲೇಜು ಉಪನ್ಯಾಸಕಿಯೂ ಹೊಂಡದ ಕಾರಣದಿಂದ ಮೃತಪಟ್ಟಿದ್ದರು.
“ಹೆದ್ದಾರಿ ಅಧಿಕಾರಿಗಳಿಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋದರೆ ಉತ್ತಮ. ಟೋಲ್ಗೇಟ್ನಲ್ಲಿ ವರ್ಷಕ್ಕೆ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತಿದ್ದರೂ ದುರಸ್ತಿ ಕೆಲಸಕ್ಕೆ ಬಳಸಲಾಗುತ್ತಿಲ್ಲ. ಹತ್ತು ವರ್ಷಗಳಲ್ಲಿ ಸಂಗ್ರಹವಾದ ಹಣ ಎಲ್ಲಿ?” ಎಂದು ಅವರು ಪ್ರಶ್ನಿಸಿದರು.
“ಹೊಂಡ ಮುಚ್ಚುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಹೆದ್ದಾರಿಯನ್ನು ಕಾಂಕ್ರೀಟಿಕರಣ ಮಾಡುವುದೇ ಶಾಶ್ವತ ಪರಿಹಾರ,” ಎಂದು ಮಾಜಿ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್ ಒತ್ತಾಯಿಸಿದರು.