ಹೊಳ್ಮಗೆ ವಿನೋದಾ ರವಿ ಶೆಟ್ಟಿ ಸಾಂಸ್ಕೃತಿಕ ರಂಗ ‘ ಐಕ್ಯಂಮ್ ‘ ಲೋಕಾರ್ಪಣೆ
ಕುಂದಾಪುರ : ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಇರುವ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೂ ಒಳ್ಳೆಯ ಶಿಕ್ಷಣಾವಕಾಶ ದೊರೆತು, ಅವರು ವಿದ್ಯಾವಂತರಾಗಿ, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದ ಆದರ್ಶ ರಾಜಕಾರಣಿ ಯಡ್ತರೇ ಮಂಜಯ್ಯ ಶೆಟ್ಟಿಯವರು ಶಾಸಕರಾಗಿದ್ದ ಕಾಲದಲ್ಲಿ ಆರಂಭವಾಗಿದ್ದ ವಂಡ್ಸೆಯ ಮಲ್ನಾಡ್ ಹೈಸ್ಕೂಲ್ ಶಿಕ್ಷಣಾಸಕ್ತ ಮನಸ್ಸುಗಳಿಗೂ ದೇವಾಲಯವಿದ್ದಂತೆ ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಮಕ್ಕಳ ಅವಶ್ಯತೆಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಾಗೂ ಬೆಳವಣಿಗೆಗೆ ಸರ್ಕಾರ ಇಚ್ಛಾಶಕ್ತಿ ತೋರಬೇಕು. ಅಧ್ಯಾಪಕರ ಕೊರತೆ, ಮೂಲ ಸೌಕರ್ಯಗಳ ಕೊರತೆ ನೀಗಿಸವಲ್ಲಿ ಆದ್ಯತೆ ನೀಡಬೇಕು. ಶಿಕ್ಷಣ ಸಂಸ್ಥೆಗಳ ಆವರಣ ಯಾವಾಗಲೂ ರಾಜಕೀಯ, ದ್ವೇಷ ಮತ್ತು ಅಸೂಯೆಗಳಿಂದ ದೂರವಿರವೇಕು. ಗುಂಪುಗಾರಿಕೆ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಸಮಾಜದ ಬೆಳವಣಿಗೆಯ ಬ್ರಹ್ಮಾಸ್ತ್ರವಾಗಿರುವ ಶಿಕ್ಷಣ ಸಂಸ್ಥೆಗಳ ಕೊಡುಗೆಗಳನ್ನು ಸಮಾಜ ಮರೆಯಬಾರದು ಎಂದ ಅವರು ಬೈಂದೂರು ವಿಧಾನಸಭಾ ಕ್ಷೇತ್ರ ನಿರೀಕ್ಷೆಯಂತೆ ಅಭಿವೃದ್ಧಿಯಾಗದೆ ಇರುವ ಕುರಿತು ಬೇಸರವಿರುವುದಾಗಿ ಹೇಳಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು, ಪತ್ನಿ ಕಲಿತ ಶಾಲೆಯ ಅಭ್ಯುದಯಕ್ಕಾಗಿ 75 ಲಕ್ಷದ ದೊಡ್ಡ ಕೊಡುಗೆಯನ್ನು ನೀಡಿ, ಪತ್ನಿಯ ಹೆಸರನ್ನು ಶಾಶ್ವತವಾಗಿಸುವ ಜೊತೆಯಲ್ಲಿ ಸಮಾಜದ ಋಣ ತೀರಿಸುವ ಡಾ.ರವೀಂದ್ರನಾಥ ಶೆಟ್ಟಿ ಅವರ ಕೊಡುಗೆ ಅನನ್ಯವಾದುದು. ಸಮರ್ಥ ನಾಯಕತ್ವ ಇದ್ದಾಗ ಮಾತ್ರ ಯಾವುದೇ ಯೋಜನೆಗಳು ಸಾರ್ಥವಾಗಿ ಅನುಷ್ಠಾನವಾಗುತ್ತದೆ ಎನ್ನುವುದಕ್ಕೆ ಬಿ.ಎನ್.ಶೆಟ್ಟಿಯವರೇ ಉದಾಹರಣೆಯಾಗಿದ್ದಾರೆ. ಈ ರೀತಿಯ ಶಿಕ್ಷಣಾಸಕ್ತ ಮನಸ್ಸುಗಳು ಕೇವಲ 10 ಇದ್ದರೂ, ಬೈಂದೂರು ಕ್ಷೇತ್ರದ ಅಭಿವೃಧ್ಧಿಯ ಸ್ವರೂಪವೇ ಬದಲಾಗುತ್ತದೆ. ಹುಟ್ಟೂರು, ವಿದ್ಯೆ ನೀಡಿದ ಶಾಲೆ, ಭಾವನೆ ಬೆಸೆದ ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನ ನಮ್ಮ ಜವಾಬ್ದಾರಿ ಎಂದು ಭಾವಿಸಿ ಸ್ಪಂದಿಸುತ್ತಿರುವ ಬಗ್ವಾಡಿ ಕುಟುಂಬಸ್ಥರು ಹಾಗೂ ಈ ವಿದ್ಯಾ ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿಗಳು ನಿತ್ಯ ಸ್ಮರಣೀಯರು. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 300 ಸರ್ಕಾರಿ ಶಾಲೆಗಳನ್ನು 300 ಸಸಿಗಳಂತೆ ಬೆಳೆಸಲು ಯೋಜನೆಗಳನ್ನು ರೂಪಿಸಿಕೊಳ್ಳಲು ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರಾದ ಬಿ.ಎನ್.ಶೆಟ್ಟಿ ಅವರು, ಜನ್ಮ ನೀಡಿದ ಭೂಮಿ, ವಿದ್ಯೆ ಕಲಿಸಿದ ಶಾಲೆಗಳನ್ನು ಯಾರು ಮರೆಯಬಾರದು. ನಮ್ಮ ಜೀವನದ ಪ್ರತಿಯೊಂದು ಯಶಸ್ಸಿನ ಹಿಂದೆ ಇದ್ದವರನ್ನು ಸ್ಮರಣೆ ಮಾಡಿಕೊಳ್ಳಬೇಕು. ಅವಕಾಶ ದೊರೆತಾಗ ಉಸಿರು, ಜೀವನ, ಅಧಿಕಾರ, ಶ್ರೀಮಂತಿಕೆ ಎಲ್ಲವನ್ನು ನೀಡಿರುವ ಸಮಾಜದ ಋಣ ತೀರಿಸುವ ಕೆಲಸವಾಗಬೇಕು. ಕರ್ತವ್ಯ ಸೇವೆಯಿಂದ ನಿವೃತ್ತರಾದರೂ, ನಮ್ಮ ಕರ್ತವ್ಯ ಇನ್ನೂ ಹೆಚ್ಚಿದೆ ಎನ್ನುವ ಭಾವನೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃಧ್ಧಿಗೆ ಪ್ರತಿಯೊಬ್ಬ ಪ್ರಾಕ್ತನ ವಿದ್ಯಾರ್ಥಿಗಳು ಮುಂದಾದಾಗ ಸರ್ಕಾರದ ಹೊರೆಯೂ ಕಡಿಮೆಯಾಗುತ್ತದೆ, ಜೊತೆಯಲ್ಲಿ ಊರು ಅಭಿವೃಧ್ಧಿಯಾಗುತ್ತದೆ ಎನ್ನುವ ದಿಸೆಯಲ್ಲಿ ಈ ಯೋಜನೆ ರೂಪಿಸಿಕೊಳ್ಳಲಾಯ್ತು ಎಂದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕರ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೀವ ಶೆಟ್ಟಿ ಬಿಜ್ರಿ, ಕುಂದಾಪುರ ರೆಡ್ಕ್ರಾಸ್ ಘಟಕದ ಅಧ್ಯಕ್ಷ ಎಸ್.ಜಯಕರ ಶೆಟ್ಟಿ, ಉದ್ಯಮಿ ಅಶೋಕಕುಮಾರ ಶೆಟ್ಟಿ ಕುಂದಾಪುರ, ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕೆಪಿಎಸ್ ಸ್ಕೂಲ್ ಪ್ರಾಂಶುಪಾಲ ಕೃಷ್ಣರಾಜ್ ಭಟ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೆ.ನಾರಾಯಣ ಶೆಟ್ಟಿ, ಅಧ್ಯಕ್ಷ ಎನ್.ಸಂತೋಷ್ಕುಮಾರ ಶೆಟ್ಟಿ ಇದ್ದರು.
ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ ಡಾ.ರವೀಂದ್ರನಾಥ ಶೆಟ್ಟಿ ಹಳ್ನಾಡು ಹಾಗೂ ಗೀತಾ ಆರ್ ಶೆಟ್ಟಿ, ಬಿ.ಎನ್.ಶೆಟ್ಟಿ ಹಾಗೂ ಶೋಭಾ ಬಿ.ಎನ್.ಶೆಟ್ಟಿ, ಪುತ್ಥಳಿ ನಿರ್ಮಾಣ ಮಾಡಿದ ಶಿಲ್ಪಿ ಪ್ರಶಾಂತ್ ಉಪ್ಪುಂದ ಹಾಗೂ ಇತರ ದಾನಿಗಳನ್ನು ದಂಪತಿ ಸಹಿತವಾಗಿ ಗೌರವಿಸಲಾಯಿತು. ಗಜದ್ವಾರ ಉದ್ಘಾಟನೆ, ಮಾಜಿ ಶಾಸಕ ಯಡ್ತರೇ ಮಂಜಯ್ಯ ಶೆಟ್ಟಿ ಪುತ್ಥಳಿ ಅನಾವರಣ, ಹಳೆ ವಿದ್ಯಾರ್ಥಿ ಸಂಘದ ಕಚೇರಿ ಉದ್ಘಾಟನೆ, ಜ್ಞಾನ ಸಂಗಮ ಸಭಾಂಗಣ, ಶೋಭಾ ಬಿ.ಎನ್.ಶೆಟ್ಟಿ ಬಗ್ವಾಡಿ ಯಕ್ಷರಂಗ ಸಭಾ ವೇದಿಕೆ ಉದ್ಘಾಟನೆ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಚಿತ್ತೂರು ಸ್ವಾಗತಿಸಿದರು, ಶಿಕ್ಷಕ ವಸಂತ್ರಾಜ್ ಶೆಟ್ಟಿ ವಂಡ್ಸೆ ಸನ್ಮಾನ ಪತ್ರ ಓದಿದರು, ಡಾ.ಕಿಶೋರಕುಮಾರ ಶೆಟ್ಟಿ ನಿರೂಪಿಸಿದರು, ಮುಖ್ಯ ಶಿಕ್ಷಕ ಶ್ರೀಧರ ಭಟ್ ವಂದಿಸಿದರು.