10 ಕೋಟಿ ರೂ ವೆಚ್ಚದಲ್ಲಿ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಾಲಯದ ಸಮಗ್ರ ಜೀರ್ಣೊದ್ಧಾರ

Spread the love

10 ಕೋಟಿ ರೂ ವೆಚ್ಚದಲ್ಲಿ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಾಲಯದ ಸಮಗ್ರ ಜೀರ್ಣೊದ್ಧಾರ

ಉಡುಪಿ: ಇಲ್ಲಿನ ಪೆರ್ಣಂಕಿಲ ಗ್ರಾಮದಲ್ಲಿರುವ ಪುರಾತನ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಾಲಯವನ್ನು ಸುಮಾರು 10 ಕೋಟಿ ರು. ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಳಿಸಲು ನಿರ್ಧರಿಸಲಾಗಿದ್ದು, ಫೆ. 23ರಂದು ದೇವರ ಬಿಂಬದ ಸಂಕೋಚನದಿಂದ ಕಾಮಗಾರಿಯು ಆರಂಭವಾಗಲಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರಿದಾಸ ಭಟ್ ಮುಂಬೈ ಮತ್ತು ಶ್ರೀಶ ನಾಯಕ್ ಪೆರ್ಣಂಕಿಲ ಹೇಳಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಸ್ತುತ ಉಡುಪಿ ಪೇಜಾವರ ಮಠದ ಆಡಳಿತದಲ್ಲಿರುವ ಈ ದೇವಾಲಯವನ್ನು ಸುಮಾರು 1000 ವರ್ಷಗಳ ಹಿಂದೆ ಅಳುಪ ವಂಶದ ರಾಣಿ ಬಲ್ಲ ಮಹಾದೇವಿ ನಿರ್ಮಿಸಿದಳೆಂದು ಶಾಸನ ಲಭ್ಯವಿದೆ. ಇಲ್ಲಿ ಪೂರ್ವಾಭಿಮುಖವಾಗಿ ಮಹಾಲಿಂಗೇಶ್ವರ ಮತ್ತು ಪಶ್ಚಿಮಾಭಿಮುಖವಾಗಿ ಮಹಾಗಣಪತಿ ದೇವಾಲಯಗಳಿರುವುದು ವಿಶೇಷವಾಗಿದೆ.

ಊರಿನ ಪ್ರತಿಯೊಂದು ಮನೆಯೂ ಈ ಜೀರ್ಣೋದ್ಧಾರದಲ್ಲಿ ಕೈಜೋಡಿಸಬೇಕು ಎಂಬ ವಿಶಿಷ್ಟ ಪರಿಕಲ್ಪನೆಯಡಿ 1000 ಕಲ್ಲುಗಳನ್ನು ಸಿದ್ದಪಡಿಸಲಾಗಿದೆ. ಶಿಲಾನ್ಯಾಸದಂದು ಪ್ರತಿಯೊಂದು ಮನೆಯವರು ಬಂದು ಉಚಿತವಾಗಿ ಈ ಕಲ್ಲುಗಳಿಂದ ತಾವೇ ಶಿಲಾನ್ಯಾಸ ನಡೆಸಲಿದ್ದಾರೆ ಎಂದರು

ಹಿಂದೆ ಪೇಜಾವರ ಮಠಕ್ಕೆ ಸೇರಿದ್ದ ನೂರಾರು ಎಕ್ರೆ ಭೂಮಿ ನಂತರ ಉಳುವವರ ಪಾಲಾಯಿತು. ಈಗ ಅದು ಹಡಿಲು ಬಿದ್ದಿದ್ದು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಅದನ್ನು ಮರಳಿ ಪಡೆದು, ಬೃಹತ್ ಕೆರೆ, ಗೋಶಾಲೆ, ಗುರುಕುಲ ಮತ್ತು ಸಾವಿರಾರು ಮರಗಳ ವನ ನಿರ್ಮಿಸಲು ಯೋಜಿಸಿದ್ದಾರೆ.

ಜ.12ರಂದು ಜೀರ್ಣೋದ್ಧಾರದ ಪ್ರಾಥಮಿಕ ವಿಧಿಯಾಗಿ ಕೊಪ್ಪರಿಗೆ ಅಪ್ಪ ಸೇವೆ, 100 ನಾರಿಕೇಳ ಗಣಹೋಮ, ಶತ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಐಕ್ಯಮತ ಹೋಮಗಳು ನಡೆಯಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠದ ದಿವಾನರಾದ ಸುಬ್ರಹ್ಮಣ್ಯ ಭಟ್ ಸಗ್ರಿ, ದೇವಳದ ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ ಸರಳಾಯ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here