10 ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಡಿ.ಕೆ.ಶಿವಕುಮಾರ್

Spread the love

10 ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಡಿ.ಕೆ.ಶಿವಕುಮಾರ್
 

ಶಿವಮೊಗ್ಗ: ‘ಮುಂದಿನ 10 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿಯ ಹಲವು ಸಭೆಗಳಿವೆ. ಆ ಕಾರ್ಯ ಮುಗಿದ ನಂತರ ನಿರ್ಧರಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸ್ಕ್ರೀನಿಂಗ್ ಕಮಿಟಿಯ ಹಲವು ಸಭೆಗಳಿವೆ. ಆ ಕಾರ್ಯ ಮುಗಿದ ನಂತರ ನಿರ್ಧರಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಅಭ್ಯರ್ಥಿಯ ಪಟ್ಟಿ ಬಿಡುಗಡೆ ವಿಚಾರವಾಗಿ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಹೊಂದಾಣಿಕೆಯಿಂದ ಇದ್ದಾರೆ. ಇಬ್ಬರೂ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರು’ ಎಂದರು.

‘ಡಿ.ಕೆ.ಶಿವಕುಮಾರ್ ಅವರಿಗೆ ಜೆಡಿಎಸ್ ಪಕ್ಷ ವಿಸರ್ಜನೆ ಮುಖ್ಯ’ ಎನ್ನುವ ಎಚ್.ಡಿ.ಕುಮಾರ್‌ಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ನಾನೆಂದೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷ ವಿಸರ್ಜನೆ ಮಾಡಿ ಎಂದು ಹೇಳಿಲ್ಲ. ಜೆಡಿಎಸ್ ಗೆಲ್ಲಲಿಲ್ಲ ಎಂದರೆ ನಾನೇ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದರು. ರಾಜಕೀಯದಲ್ಲಿ ಒಂದು ಅಥವಾ ಎರಡು ಪಕ್ಷ ಇದ್ದರೆ ಪೈಪೋಟಿ ನೀಡಲು ಸಾಧಾರಣ ಎನಿಸುತ್ತದೆ. ಅದಕ್ಕಾಗಿ ಅವರು ಪಕ್ಷ ವಿಸರ್ಜನೆ ಮಾಡುವುದು ಬೇಡ. ಪಾಪ, ಅವರದ್ದೂ ಒಂದು ಪಕ್ಷ ಇರಲಿ ಬಿಡಿ’ ಎಂದು ಲೇವಡಿ ಮಾಡಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಕಣ್ಣೀರು ಹಾಕಿದ್ದು ಏಕೆಂದು ಇಂದಿಗೂ ಮರೀಚಿಕೆ ರೀತಿ ಇದೆ. ಬಲಿಷ್ಠ ಪಕ್ಷ ಎಂದು ಹೇಳುವ ಬಿಜೆಪಿ ಅವರು ಕಣ್ಣೀರು ಹಾಕುವ ರೀತಿ ಏಕೆ ಮಾಡಿದ್ದು?, ವೈಯಕ್ತಿಕ ಕಾರಣ, ಭ್ರಷ್ಟಾಚಾರ ಈ ರೀತಿ ಕಾರಣ ಏನಾದರೂ ಇದೆಯಾ? ಲೋಕಸಭಾ ಚುನಾವಣೆ ಮುನ್ನ ಮತದಾರರಿಗೆ ಕಾರಣ ನೀಡಬೇಕು ಅಲ್ಲವೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಹಾಗೂ ಪಕ್ಷದ ಮುಖಂಡರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಬಿಜೆಪಿ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧ ಎಂದಿದ್ದರು. ಆದರೆ ಸೋಲುವ ಭೀತಿ ಎದುರಾದಂತೆ ಕಾಣುತ್ತದೆ. ಅದಕ್ಕೆ ಕೇಂದ್ರದಿಂದ ರಾಜ್ಯಕ್ಕೆ ಮೋದಿಯನ್ನೇ ಕರೆ ತರಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮುಖ ಇಟ್ಕೊಂಡು ಚುನಾವಣೆ ಎದುರಿಸಲು ತಂತ್ರ ರೂಪಿಸಿದ್ದಾರೆ’ ಎಂದು ಟೀಕಿಸಿದರು.

‘ರಮೇಶ್ ಜಾರಕಿಹೊಳಿ ವಿಚಾರ ನಾನು ಮಾತನಾಡುವುದಿಲ್ಲ. ಅವರು ಹೈಕಮಾಂಡ್ ಬಳಿ ಕೇಳಿರುವ ಬೇಡಿಕೆ ಈಡೇರಿಸಲಿ ನಮ್ಮದೇನು ಅಭ್ಯಂತರವಿಲ್ಲ. ಮಾಜಿ ಸಚಿವ ಈಶ್ವರಪ್ಪ ಹಾಗೂ ರಮೇಶ್ ಜಾರಕಿ ಹೊಳಿ ಇಬ್ಬರೂ ಮಂತ್ರಿ ಸ್ಥಾನ ದೊರೆತಿಲ್ಲ ಎಂದು ಹತಾಶರಾಗಿದ್ದಾರೆ. ಪಕ್ಷದಲ್ಲಿ ಅಧಿಕಾರ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಅವರಿಬ್ಬರಲ್ಲೂ ಬುದ್ಧಿಮಟ್ಟ ಕಡಿಮೆ ಆಗಿ ಏನೇನೊ ಮಾತನಾಡುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಸಚಿವರೊಂದಿಗೆ ಸಮಲೋಚನೆ ನಡೆಸಿ ಅವರಿಬ್ಬರಿಗೂ ಉತ್ತಮ ಚಿಕಿತ್ಸೆ ಕೊಡಿಸಲಿ’ ಎಂದು ಛೇಡಿಸಿದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಗಿರೀಶ್, ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ ಎಸ್.ಪಿ. ದಿನೇಶ್ ಇದ್ದರು.


Spread the love