
100 ಮೊಬೈಲ್ ಫೋನ್‌ಗಳ ಪತ್ತೆ ಹಚ್ಚಿದ ಪೊಲೀಸರು
ಮೈಸೂರು: ನಗರ ಸೆನ್ ಠಾಣೆ ಪೊಲೀಸರು ಸಾರ್ವಜನಿಕರು ಕಳೆದುಕೊಂಡಿದ್ದ ೩೦ ಲಕ್ಷ ರೂ. ವೌಲ್ಯದ ೧೦೦ ಫೋನ್‌ಗಳನ್ನು ಪತ್ತೆ ಹಚ್ಚಿ ಕಳೆದುಕೊಂಡವರಿಗೆ ಹಿಂದಿರುಗಿಸವಲ್ಲಿ ಯಶಸ್ವಿಯಾಗಿದ್ದಾರೆ.
ನಾನಾ ಕಾರಣಗಳಿಂದ ಮೊಬೈಲ್ ಕಳೆದುಕೊಂಡಿದ್ದ ಸಾರ್ವಜನಿಕರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬುಧವಾರ ಬೆಳಗ್ಗೆ ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಮೊಬೈಲ್ ಕಳೆದುಕೊಂಡ ಸಾರ್ವಜನಿಕರಿಗೆ ಮೊಬೈಲ್ ಹಿಂದಿರುಗಿಸಿದರು. ಈ ಸಂದರ್ಭದಲ್ಲಿ ಡಿಸಿಪಿ ಎಂ. ಮುತ್ತುರಾಜು,ದೇವರಾಜ ಎಸಿಪಿ ಶಾಂತಮಲ್ಲಪ್ಪ, ಸೆನ್ ಠಾಣೆ ಇನ್ಸ್‌ಪೆಕ್ಟರ್ ಯೋಗಾನಂಜಪ್ಪ, ಎಸ್‌ಐಗಳಾದ ಪೂಜಾ ಹತ್ತರಕಿ, ಸಿದ್ದೇಶ್, ಮತ್ತು ಸಿಬ್ಬಂದಿ ಇದ್ದರು.
ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಆನ್‌ಲೈನ್ ಮೂಲಕ ಕೆಎಸ್‌ಪಿ ಆಪ್ಲಿಕೇಶನ್‌ನಲ್ಲಿ ಇ-ಲಾಸ್ಟ್ ದೂರು ದಾಖಲಿಸಿ ಸ್ವೀಕೃತಿ ಪಡೆದು ನಂತರ ಮೊಬೈಲ್ ಫೋನ್ ಮತ್ತು ದೂರಿನ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಸಿಈಐಆರ್ ಪೋರ್ಟಲ್‌ನಲ್ಲಿ ಭರ್ತಿ ಮಾಡಬೇಕು. ಬಳಿಕ ಸೆನ್ ಠಾಣೆ ಪೊಲೀಸರು ಮಾಹಿತಿ ಪರಿಶೀಲಿಸಿ ಮೊಬೈಲ್ ಪತ್ತೆಗೆ ಕ್ರಮ ವಹಿಸುತ್ತಾರೆ.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ನಗರದಲ್ಲಿ ವಿವಿಧ ಕಾರಣಗಳಿಂದ ಮೊಬೈಲ್ ಫೋನ್ ಕಳೆದುಕೊಳ್ಳುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಪತ್ತೆಗೆ ಸಿಇಐಆರ್(ಸೆಂಟ್ರಲ್ ಎಕ್ಯೂಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್‌ನಲ್ಲಿ ದಾಖಲಿಸಿದರೆ ಪೊಲೀಸರಿಗೆ ಮೊಬೈಲ್ ಪತ್ತೆಗೆ ಅನುಕೂಲವಾಗಲಿದೆ ಎಂದರು.