
108 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ಲೋಕಾರ್ಪಣೆ
ಚಾಮರಾಜನಗರ: ಪವಿತ್ರ ಕ್ಷೇತ್ರವಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಶನಿವಾರ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ಬೆಳ್ಳಿರಥವೂ ಲೋಕಾರ್ಪಣೆ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ವರದಿ ಕೊಟ್ಟಿದ್ದು, ಇನ್ನೆರೆಡು ದಿನದಲ್ಲಿ ಚಾಮರಾಜನಗರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ತಿಂಗಳಲ್ಲಿ ಎರಡನೇ ಬಾರಿಗೆ ನಾನು ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದು, ದೇವರ ಆಶೀರ್ವಾದ, ಕೃಪೆ ಎಲ್ಲರ ಮೇಲೆ ಇದೆ ಎಂದರು.
ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟದ ದೇವಾಲಯದಲ್ಲಿ ಇಂದು ಬೆಳ್ಳಿ ರಥ ಲೋಕಾರ್ಪಣೆ ಮಾಡಲಾಯಿತು. ಪ್ರಾಧಿಕಾರದ ವತಿಯಿಂದ ನಿರ್ಮಾಣ ಮಾಡಲಾಗಿರುವ ಬೆಳ್ಳಿ ರಥ ಇದಾಗಿದ್ದು, ಚಿನ್ನದ ರಥ ಈಗಾಗಲೇ ಶ್ರೀ ಕ್ಷೇತ್ರದಲ್ಲಿದ್ದು ಮೂರೂವರೇ ಕೋಟಿ ರೂ. ವೆಚ್ಚದಲ್ಲಿ 560 ಕೆಜಿ ಬೆಳ್ಳಿಯಿಂದ ಈ ರಥ ನಿರ್ಮಾಣ ಮಾಡಲಾಗಿದೆ.
108 ಅಡಿ ಎತ್ತರವಿರುವ ಮಲೆ ಮಹದೇಶ್ವರನ ಪ್ರತಿಮೆಯನ್ನು ರೂ.20 ಕೋಟಿ ವೆಚ್ಚದಲ್ಲಿ ಯೋಜನೆಯಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯ, ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡು, ಲೋಕಾರ್ಪಣೆಯಾಗಿದೆ. ಮುಂದಿನ ದಿನಗಳಲ್ಲಿ ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರ ಕಾಮಗಾರಿಗಳು ನಡೆಯಲಿವೆ.