13 ಲಕ್ಷ ಮೌಲ್ಯದ 220 ಗ್ರಾಂ ಚಿನ್ನಾಭರಣ ವಶ

Spread the love

13 ಲಕ್ಷ ಮೌಲ್ಯದ 220 ಗ್ರಾಂ ಚಿನ್ನಾಭರಣ ವಶ

ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಸರಗಳ್ಳರು, ಓರ್ವ ಮನೆ ಕಳ್ಳನನ್ನು ಬಂಧಿಸಿರುವ ಪೊಲೀಸರು, 13 ಲಕ್ಷ ರೂ. ಮೌಲ್ಯದ 220 ಗ್ರಾಂ ಚಿನ್ನದ ಆಭರಣ, ಮೂರು ಬೈಕ್, 1.32 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೋತ್ರಿ ಬಡಾವಣೆಯ ಮಹಿಳೆಯೊಬ್ಬರು ಜ.23ರಂದು ಮಾರುತಿ ಟೆಂಪಲ್ ಬಳಿಯಿರುವ ಲಾಯಲ್ ವಲ್ಡ್ ನಲ್ಲಿ ಸಾಮಾಗ್ರಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿರುವಾಗ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಖದೀಮರು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ ಸರಸ್ವತಿಪುರಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 7 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ 13 ಲಕ್ಷ ರೂ. ಬೆಲೆ ಬಾಳುವ 220 ಗ್ರಾಂ ತೂಕದ ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಿಂದ ಸರಸ್ವತಿಪುರಂ ಪೊಲೀಸ್ ಠಾಣೆಯ 3, ವಿಜಯನಗರ ಪೊಲೀಸ್ ಠಾಣೆಯ 2, ವಿದ್ಯಾರಣ್ಯಪುರಂ ಠಾಣೆಯ, ಹೆಬ್ಬಾಳ್ ಠಾಣೆಯಲ್ಲಿ ತಲಾ 1 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಡಿಸಿಪಿ ಎಸ್.ಜಾಹ್ನವಿ ಮತ್ತು ಎಸಿಪಿ ಎಸ್.ಇ.ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಪಿಐ ಗೋವಿಂದರಾಜು, ಪಿಎಸ್‌ಐ ರಮೇಶ್, ಎಎಸ್‌ಐ ಚೌಡಪ್ಪ ಹಾಗೂ ಸಿಬ್ಬಂದಿ ಮೋಹನ್‌ಕುಮಾರ್, ರಾಘವೇಂದ್ರ, ಉಮೇಶ್, ಹರೀಶ್‌ಕುಮಾರ್, ಕುಮಾರ್, ಮಂಜುನಾಥ್ ಮತ್ತು ಸಾಗರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love