17ರಂದು ಯೋಗಥಾನ್: 50 ಸಾವಿರ ಯೋಗಪಟುಗಳನ್ನು ಸೇರಿಸಲು ಜಿಲ್ಲಾಧಿಕಾರಿ ಸೂಚನೆ

Spread the love

17ರಂದು ಯೋಗಥಾನ್: 50 ಸಾವಿರ ಯೋಗಪಟುಗಳನ್ನು ಸೇರಿಸಲು ಜಿಲ್ಲಾಧಿಕಾರಿ ಸೂಚನೆ 

ಮಂಗಳೂರು: ಇದೇ ತಿಂಗಳ 17ರಂದು ನಗರದ ತಣ್ಣೀರು ಬಾವಿ ಬೀಚಿನಲ್ಲಿ 40,000 ಹಾಗೂ ಮೂಡುಬಿದರೆಯ ಆಳ್ವಾಸ್ ಮೈದಾನದಲ್ಲಿ 10,000 ಯೋಗ ಪಟುಗಳಿಂದ ಯೋಗಥಾನ್ ಹಮ್ಮಿಕೊಳ್ಳಲಾಗಿದ್ದು, 50 ಸಾವಿರ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಂಬಂಧಿಸಿದ ಅಧಿಕಾರಿಗಳು ಪೂರಕ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ನಿರ್ದೇಶನ ನೀಡಿದರು.

ಅವರು ಸೆ.06ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಯೋಗಥಾನ್-2022 ಆಯೋಜನೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೆ.17ರ ಬೆಳಿಗ್ಗೆ 9 ರಿಂದ 10 ಗಂಟೆಯ ವರೆಗೆ ನಡೆಯುವ ಯೋಗಥಾನ್‍ಗೆ ಜಿಲ್ಲೆಯ ಮಂಗಳೂರು ನಗರದ ತಣ್ಣಿರು ಬಾವಿ ಬೀಚ್ ಹಾಗೂ ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಇದರಲ್ಲಿ 50 ಸಾವಿರ ಯೋಗಪಟುಗಳು ಭಾಗವಹಿಸಬೇಕೆಂದು ನಿರ್ದೇಶನ ನೀಡಲಾಗಿದೆ, ಅದರಂತೆ 50 ಸಾವಿರಕ್ಕೂ ಹೆಚ್ಚಿನ ಯೋಗಪಟುಗಳ ನೋಂದಣಿಯಾಗಬೇಕು, ಕೂಡಲೇ ನೋಂದಣಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು, ಈ ಯೋಗಪಟುಗಳನ್ನು ತಣ್ಣೀರು ಬಾವಿ ಬೀಚ್‍ಗೆ ಅಂದು ಕರೆತರಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಗಳು, ಜಿಲ್ಲೆಯಲ್ಲಿರುವ ಮೆಡಿಕಲ್, ಎಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಯೋಗಥಾನ್‍ನಲ್ಲಿ ಭಾಗವಹಿಸಲು ಜಾಗೃತಿ ಮೂಡಿಸುವಂತೆ ಆಯಾ ಕಾಲೇಜುಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಬೇಕು, ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಬೇಕು, ಐಇಸಿ ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳಬೇಕು ಎಂದು ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ನಗರದಲ್ಲಿರುವ ಕಾಲೇಜುಗಳಿಗೆ ಭೇಟಿ ನೀಡಿ ಯೋಗಥಾನ್ ಬಗ್ಗೆ ಅರಿವು ಮೂಡಿಸಬೇಕು, ಯಾವುದೇ ಕಾರಣಕ್ಕೂ ಭಾಗವಹಿಸುವ ಸಂಖ್ಯೆ 50,000 ಯೋಗಪಟುಗಳಿಗಿಂತ ಕಡಿಮೆ ಆಗದಂತೆ ಎಚ್ಚರ ವಹಿಸಬೇಕು, ಜಿಲ್ಲೆಯಲ್ಲಿ ಸಾಕಷ್ಟು ಯೋಗ ಕೇಂದ್ರಗಳಿವೆ ಅಲ್ಲಿನ ಯೋಗಪಟುಗಳು, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು, ಯುವಕ-ಯುವತಿಯರ ಕ್ಲಬ್‍ಗಳು, ಎನ್‍ಸಿಸಿ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳು, ಹೋಂ ಗಾಡ್ರ್ಸ್‍ಗಳು, ಪೊಲೀಸರು, ಕರಾವಳಿ ಕಾವಲು ಪಡೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಒಟ್ಟುಗೂಡಿ ಈ ಯೋಗಾಥಾನ್ ಅನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಅಂದಿನ ಯೋಗಥಾನ್‍ನಲ್ಲಿ ಯಾವ ಯಾವ ಆಸನಗಳನ್ನು ಹೇಳಿಕೊಡಲಾಗುವುದು ಎಂಬುದರ ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಬೇಕು ಹಾಗೂ ಅದನ್ನು ಅಭ್ಯಾಸ ಮಾಡುವಂತೆ ಯೋಗಪಟುಗಳಿಗೆ ಕರೆ ನೀಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ್ ವೇದಿಕೆಯಲ್ಲಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಇಕ್ಬಾಲ್, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಸಂಚಾರಿ ಎಸಿಪಿ ಗೀತಾ ಕುಲಕರ್ಣಿ, ಯನಪೋಯ ಎನ್‍ಎಸ್‍ಎಸ್ ಅಧಿಕಾರಿ ಅಶ್ವಿನಿ ಶೆಟ್ಟಿ, ಆಯುಷ್ ಟಿವಿಯ ಸದಾನಂದ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.ವಿವಿಧ ಯೋಗ ಕೇಂದ್ರಗಳ ಯೋಗ ಪಟುಗಳು ಭಾಗವಹಿಸಿದ್ದರು.


Spread the love

Leave a Reply

Please enter your comment!
Please enter your name here