2ನೇ ಹಂತದ ಗ್ರಾಮ ಸಂಗ್ರಾಮ: ಕುಂದಾಪುರ ತಾಲೂಕಿನಲ್ಲಿ ಬಿರುಸಿನ ಮತದಾನ

Spread the love

2ನೇ ಹಂತದ ಗ್ರಾಮ ಸಂಗ್ರಾಮ: ಕುಂದಾಪುರದಲ್ಲಿ ಬಿರುಸಿನ ಮತದಾನ

ಕುಂದಾಪುರ: ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಕುಂದಾಪುರ ತಾಲೂಕಿನಲ್ಲಿ ಭಾನುವಾರ ಬೆಳಿಗ್ಗಿನಿಂದ ಆರಂಭವಾಗಿದ್ದು ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.

ತಾಲೂಕಿನ 43 ಗ್ರಾಮ ಪಂಚಾಯತ್ ಗಳಿಗೆ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಎಲ್ಲೆಡೆ ಕಂಡುಬಂದಿದೆ.

ತಾಲೂಕಿನ 43 ಗ್ರಾಮ ಪಂಚಾಯತ್ ಗಳ 530 ಸ್ಥಾನಗಳಿಗಾಗಿ 1,262 ಅಭ್ಯರ್ಥಿಗಳು ಕಣದಲ್ಲಿ ಇದ್ದು, 24 ಕಡೆಗಳಲ್ಲಿ ಅವಿರೋಧ ಆಯ್ಕೆಯಾಗಿದೆ. 1,86,685 ಮತದಾರರು ಮತ ಚಲಾಯಿಸುವ ಅವಕಾಶ ಪಡೆದುಕೊಂಡಿದ್ದಾರೆ. 1,150 ಅಧಿಕಾರಿಗಳು ಚುನಾವಣಾ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ ಒಟ್ಟು 271 ಮತ ಗಟ್ಟೆಗಳ ಪೈಕಿ 5 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ನಡೆದಿರುವುದ ರಿಂದ, 266 ಮತಗಟ್ಟೆಗಳಲ್ಲಿ ಮಾತ್ರ ಮತದಾನ ನಡೆಯುತ್ತಿದೆ. ಓರ್ವ ಡಿವೈಎಸ್ಪಿ, ನಾಲ್ವರು ಸಿಪಿಐ, ವಿವಿಧ ಠಾಣೆಗಳ ಒಟ್ಟು ಹನ್ನೆರಡು ಮಂದಿ ಪಿಎಸ್ಐ, 32 ಎಎಸ್ಐ, 300 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು, ಒಂದು ಕೆಎಸ್ಆರ್ಪಿ, ಒಂದು ಡಿಎಆರ್ ಚುನಾವಣಾ ಕರ್ತವ್ಯದಲ್ಲಿದ್ದಾರೆ.

ಕೊರೋನಾ ಹಿನ್ನೆಲೆ ಮತದಾನ ದಿನದಂದು ಎಲ್ಲಾ 266 ಮತಗಟ್ಟೆಯಲ್ಲಿ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಿಕೊಂಡು ಸ್ಯಾನಿಟೈಸಿಂಗ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿ ಮತದನಾದಕ್ಕೆ ಅವಕಾಶ ಮಾಡಿಕೊಡಲಾಗಿದೆ.

266 ಮತಗಟ್ಟೆಗಳ ಪೈಕಿ ಎಪ್ಪತ್ತು ಸೂಕ್ಷ್ಮ ಹಾಗೂ ಇಪ್ಪತ್ತು ನಕ್ಸಲ್ ಪೀಡಿತ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸಸ್ತ್ರಮೀಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.


Spread the love