
2,000 ರೂ ಮುಖಬೆಲೆಯ ಕರೆನ್ಸಿ ನೋಟು ಹಿಂಪಡೆದ ಆರ್ಬಿಐ
ನವದೆಹಲಿ: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ಈ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಸಿಂಧುವಾಗಿ ಮುಂದುವರಿಯಲಿವೆ.
RBI decides to withdraw ₹2000 denomination banknotes from circulation, will continue as legal tender pic.twitter.com/Lc9ejtcSIX
— Aanchal Magazine (@AanchalMagazine) May 19, 2023
ಆರ್ಬಿಐ ಶುಕ್ರವಾರ ಈ ಹೇಳಿಕೆ ನೀಡಿದೆ. 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಲು ಸಮಯಾವಕಾಶ ಕೊಡಲಾಗುತ್ತದೆ. ಆರ್ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು.
2,000 ರೂ ಮುಖಬೆಲೆಯ ನೋಟು ಹಿಂಪಡೆಯಲು ಏನು ಕಾರಣ?
- ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ. 89ರಷ್ಟು ನೋಟುಗಳನ್ನು 2017ರ ಮಾರ್ಚ್ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಡಿದಂಥವು. ಇವುಗಳ ಕಾಲಾವಧಿ 4-5 ವರ್ಷ ಮಾತ್ರ.
- ಹೀಗಾಗಿ, ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ.
- 2,000 ರೂ ಮುಖಬೆಲೆಯ ನೋಟುಗಳು ಹೆಚ್ಚು ಚಲಾವಣೆಯಲ್ಲಿ ಇಲ್ಲದಿರುವುದು
- ಜನರ ಹಣ ವಹಿವಾಟಿನ ಅಗತ್ಯಕ್ಕೆ ಬೇರೆ ಕರೆನ್ಸಿಗಳು ಸಾಕಷ್ಟು ಇರುವುದು
2028ರ ಮಾರ್ಚ್ 31ರಲ್ಲಿ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿ ರೂ ಇತ್ತು. ಎಲ್ಲಾ ಕರೆನ್ಸಿ ನೋಟುಗಳ ಒಟ್ಟು ಮೊತ್ತದ ಶೇ. 37.3 ರಷ್ಟು ನೋಟುಗಳು 2,000 ರೂ ಮುಖಬೆಲೆಯದ್ದಾಗಿದ್ದವು. ಈ ಸಂಖ್ಯೆಯು 2023 ಮಾರ್ಚ್ 31ಕ್ಕೆ ಶೇ. 10.8ಕ್ಕೆ ಬಂದಿಳಿದಿದೆ.
ಅಲ್ಲದೇ ಜನರೂ ಕೂಡ 2,000 ರೂ ನೋಟಿನ ಚಲಾವಣೆಯನ್ನೂ ತೀರಾ ಕಡಿಮೆ ಮಾಡಿದ್ದಾರೆ. 500 ರೂ ಮುಖಬೆಲೆಯ ನೋಟುಗಳಿಗೆ ಹೆಚ್ಚು ಬೇಡಿಕೆ ಇದೆ.
ಸಾರ್ವಜನಿಕರು ತಮ್ಮ ಬಳಿ 2,000 ರೂ ಮುಖಬೆಲೆಯ ನೋಟುಗಳಿದ್ದರೆ ಅದನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಯಾವುದೇ ಬ್ಯಾಂಕ್ ಬ್ರ್ಯಾಂಚ್ಗೆ ಹೋಗಿ ಹಣ ಡೆಪಾಸಿಟ್ ಮಾಡಲು ಅವಕಾಶ ಇರುತ್ತದೆ. 2016ರ ನೋಟ್ ಬ್ಯಾನ್ ಸಂದರ್ಭದಲ್ಲಿ ಇದ್ದ ನಿಯಮಗಳನ್ನು ಈಗ ಮಾಡಲಾಗುತ್ತಿಲ್ಲ. 2,000 ರೂ ನೋಟುಗಳನ್ನು ಡೆಪಾಸಿಟ್ ಮಾಡಲು ಯಾವುದೇ ದಾಖಲೆ ಕೊಡಬೇಕಿಲ್ಲ. ಈ ನೋಟನ್ನು ಅಮಾನ್ಯ ಮಾಡಲಾಗಿಲ್ಲ. ಚಲಾವಣೆಯಿಂದ ಹಿಂಪಡೆಯಲಾಗಿದೆ ಅಷ್ಟೇ. ಈ ನೋಟುಗಳ ವಿನಿಮಯಕ್ಕೆ ಸರ್ಕಾರ ಕೊಟ್ಟಿರುವ ಕಾಲಾವಕಾಶ ಮುಗಿದ ಬಳಿಕ ಈ ನೋಟು ಅಸಿಂಧುಗೊಳ್ಳಬಹುದಾ ಎಂಬ ಮಾಹಿತಿ ತಿಳಿದಿಲ್ಲ.
2,000 ರೂ ನೋಟು ವಿನಿಮಯಕ್ಕೆ ಏನಿವೆ ನಿಯಮಗಳು?
- ಸಾರ್ವಜನಿಕರು ಒಮ್ಮೆಗೆ 20,000 ರೂ ಮೊತ್ತದ ನೋಟುಗಳನ್ನು ವಿನಿಯಮ ಮಾಡಿಕೊಳ್ಳಲು ಅವಕಾಶ ಇದೆ. ಅಂದರೆ 2,000 ರೂ ಮುಖಬೆಲೆಯ 10 ನೋಟುಗಳನ್ನು ಮಾತ್ರ ಎಕ್ಸ್ಚೇಂಜ್ ಮಾಡಬಹುದು.
- ಬ್ಯಾಂಕ್ ಖಾತೆ ಹೊಂದಿಲ್ಲದಿದ್ದವರೂ ಕೂಡ ಯಾವುದೇ ಬ್ಯಾಂಕ್ ಕಚೇರಿಗೆ ಹೋಗಿ ಏಕಕಾಲದಲ್ಲಿ 2,000 ರೂ ಮುಖಬೆಲೆಯ 10 ನೋಟುಗಳನ್ನು ವಿನಿಯಮ ಮಾಡಿಕೊಳ್ಳಬಹುದು.
- ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಯಾವುದೇ ಮಿತಿ ಇಲ್ಲ. 2,000 ರೂ ಮುಖಬೆಲೆಯ ಎಷ್ಟು ಬೇಕಾದರೂ ನೋಟುಗಳನ್ನು ಅಕೌಂಟ್ಗೆ ಡೆಪಾಸಿಟ್ ಮಾಡಬಹುದು.