21 ವರ್ಷಗಳ ಬಳಿಕ ಕೊಲ್ಲೂರು ದೇವಳದಲ್ಲಿ ಎ. 30-ಮೇ11 ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ

Spread the love

21 ವರ್ಷಗಳ ಬಳಿಕ ಕೊಲ್ಲೂರು ದೇವಳದಲ್ಲಿ ಎ. 30-ಮೇ11 ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕುಂದಾಪುರ: ಶಾಸ್ತ್ರದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ನಡೆಸಬೇಕು ಎಂದಿದ್ದರೂ ಅನಿವಾರ್ಯ ಕಾರಣಗಳಿಂದ ಕಳೆದ 21 ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯದೆ ಇದ್ದ ದೇವತಾ ಕಾರ್ಯ ನಡೆಸಲು ಈಗ ಕಾಲ ಕೂಡಿ ಬಂದಿದೆ. 21 ವರ್ಷಗಳ ಬಳಿಕ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ತಿಳಿಸಿದ್ದಾರೆ.

ಮಂಗಳವಾರ ಕೊಲ್ಲೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎ.30 ರಿಂದ ಮೇ 11 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಎಲ್ಲರ ಅಭಿಪ್ರಾಯ ಪಡೆದುಕೊಂಡು ಉತ್ಸವ ದಿನಾಂಕ ನಿಶ್ಚಯ ಮಾಡಲಾಗಿದ್ದು, ಕ್ಷೇತ್ರದ ಅರ್ಚಕರ ಹಾಗೂ ಭಕ್ತರ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಯೋಜನೆ ರೂಪಿಸಲಾಗುವುದು. ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಅಂದಾಜು 5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ದೇವಸ್ಥಾನದಿಂದ 2 ಕೋಟಿ ಬಳಸಿಕೊಳ್ಳಲು ಹಾಗೂ ಉಳಿದ 3 ಕೋಟಿಯನ್ನು ಭಕ್ತರಿಂದ ಸಂಗ್ರಹಿಸಿ ಖರ್ಚು ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಹೃದಯ ಭಕ್ತರ ಸಹಕಾರವನ್ನು ಕೋರಲಾಗಿದೆ.

1972 ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವಾಗ ದೇವಸ್ಥಾನದ ಪರಿವಾರ ದೇವರುಗಳಲ್ಲಿ ಪ್ರಮುಖವಾದ ವೀರಭದ್ರ ದೇವರ ಗುಡಿಯ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿತ್ತು. 2002 ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರಕ್ಕೆ ನೂತನ ಶಿಲಾ ಮಹಾದ್ವಾರ, ಸ್ವಾಗತ ಗೋಪುರ ಹಾಗೂ ಸ್ವರ್ಣಲೇಪಿತ ಧ್ವಜಸ್ಥಂಭ ಸಮರ್ಪಣೆ ಕಾರ್ಯ ನಡೆದಿತ್ತು. ಈ ಬಾರಿಯ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವದಲ್ಲಿ ವೀರಭದ್ರ ದೇವರ ನೂತನ ಶಿಲಾಮಯ ದೇವಸ್ಥಾನ ಹಾಗೂ ನೂತನ ಬ್ರಹ್ಮರಥ ಲೋಕಾರ್ಪಣೆಯಾಗಿರುವುದು ವಿಶೇಷವಾಗಿದೆ ಎಂದರು.

ಪ್ರಭಾರ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅವರು ಮಾತನಾಡಿ, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಯೋಜನೆ ರೂಪಿಸಲಾಗುವುದು. ಜಿಲ್ಲಾಡಳಿತ, ಮುಜರಾಯಿ ಇಲಾಖೆ, ಸರ್ಕಾರ ಹಾಗೂ ಭಕ್ತರಿಂದ ಎಲ್ಲಾ ರೀತಿಯ ಸಹಕಾರ ಪಡೆದುಕೊಳ್ಳಲಾಗುವುದು. ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕಾಗಿ ದೇಣಿಗೆ ನೀಡುವವರಿಗೆ ದೇವಸ್ಥಾನದ ಒಳ ಭಾಗದ ವಿಶೇಷ ಕೌಂಟರ್ ಹೊರತು ಪಡಿಸಿ ಬೇರೆ ಎಲ್ಲಿಯೂ ನಗದು ಪಾವತಿಗೆ ಅವಕಾಶ ಇಲ್ಲ. ದೇಣಿಗೆ ನೀಡುವವರು ಕೊಲ್ಲೂರು ಕೆನರಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ 01752200000014 ( ಐಎಫ್ಎಸ್ಸಿ : ಸಿಎನ್ಆರ್ಬಿ0010175 / ಎಂಐಸಿಆರ್:576015049 ) ಕ್ಕೆ ಆನ್ ಲೈನ್ ಮೂಲಕ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಹಣ ಸಂದಾಯ ಮಾಡಲು ಅವಕಾಶ ನೀಡಲಾಗಿದೆ ಎಂದರು.

ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗ ಮಾತನಾಡಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಆಗುವುದರಿಂದ ಸಾನಿಧ್ಯದ ಶಕ್ತಿ ವೃದ್ಧಿಸುತ್ತದೆ ಎನ್ನುವ ನಂಬಿಕೆ ಇದೆ. ಮಂತ್ರ – ತಂತ್ರಗಳ ಮೂಲಕ ಲಿಂಗ ಮತ್ತು ಪೀಠವನ್ನು ವಿವಿಧ ದ್ರವ್ಯ ಮಿಶ್ರಣದಿಂದ ಲೇಪನ ಮಾಡುವ ಧಾರ್ಮಿಕ ವಿಧಿಯ ಮೂಲಕ ಖುತ್ವೀಜರು ಶಾಸ್ತ್ರೋಕ್ತವಾಗಿ ಕ್ಷೇತ್ರದ ಚೈತನ್ಯ ವೃದ್ಧಿ ಮಾಡುತ್ತಾರೆ. ಈ ಪುಣ್ಯ ಕಾರ್ಯವನ್ನು ಕಾಲ ಕಾಲಕ್ಕೆ ಮಾಡದೆ ಇದ್ದಲ್ಲಿ ನೋವು, ಅನಾಹುತ ಸಂಭವಿಸುತ್ತವೆ ಎನ್ನುವ ನಂಬಿಕೆಗಳೂ ಇದೆ. ವಿಶ್ವದ ಪ್ರಾಚೀನ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಲ್ಲೂರು ಕ್ಷೇತ್ರದಲ್ಲಿ ಉದ್ಭವ ಲಿಂಗ ಸ್ವರೂಪದಲ್ಲಿ ಸ್ವರ್ಣ ರೇಖೆ ಹೊಂದಿರುವ ಅಪೂರ್ವವಾದ ‘ ಸ್ವಯಂಭೂ ‘ ವಿಗೆ ನಡೆಯುವ ಅಪೂರ್ವವಾದ ಧಾರ್ಮಿಕ ವಿಧಿಯನ್ನು ಶ್ರೀದೇವಿಯ ಭಕ್ತರು ಕಣ್ತುಂಬಿಸಿಕೊಳ್ಳಬೇಕು ಎಂದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ್, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್, ಕೆ.ಪಿ.ಶೇಖರ ಪೂಜಾರಿ, ದೇವಸ್ಥಾನದ ಸಿಬ್ಬಂದಿಗಳಾದ ಸಂತೋಷ್ ಕೊಠಾರಿ, ಪ್ರದೀಪ್ ಕುಮಾರ್ ಇದ್ದರು.


Spread the love

Leave a Reply

Please enter your comment!
Please enter your name here