
36ನೇ ಅಖಿಲ ಭಾರತ ಅಂತರ್ ವಿವಿ ಯುವಜನೋತ್ಸವ- ಏಕಾಂಕ ನಾಟಕ: ಆಳ್ವಾಸ್‍ಗೆ ದ್ವಿತೀಯ
ಮೂಡುಬಿದಿರೆ: ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಒಕ್ಕೂಟ ಹಮ್ಮಿಕೊಂಡಿದ್ದ 36ನೇ ಅಖಿಲ ಭಾರತ ಅಂತರ್ ವಿವಿ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಆಳ್ವಾಸ್ ರಂಗ ಅಧ್ಯಯನ ತಂಡ ಪ್ರಸ್ತುತ ಪಡಿಸಿದ ಏಕಾಂಕ ನಾಟಕ ‘ದುರ್ಯೋಧ’ ದ್ವಿತೀಯ ಬಹುಮಾನ ಪಡೆಯಿತು.
13ನೇ ಬಾರಿ ಆಳ್ವಾಸ್ ರಂಗ ಅಧ್ಯಯನ ತಂಡವು ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿದೆ. ಕುವೆಂಪು ಬರೆದ ‘ಸ್ಮಶಾನ ಕುರುಕ್ಷೇತ್ರ’ ಹಾಗೂ ಭಾಸ ಕವಿಯ ‘ಊರುಭಂಗ’ ಆಧರಿತ, ರಂಗ ನಿರ್ದೇಶಕ ಜೀವನ್ ರಾಂ ಮಾರ್ಗದರ್ಶನದಲ್ಲಿ, ಭುವನ್ ಮಣಿಪಾಲ ರಂಗರೂಪ ಮತ್ತು ನಿರ್ದೇಶನದ ‘ದುರ್ಯೋಧ’ ಏಕಾಂಕ ನಾಟಕವನ್ನು ಪ್ರಸ್ತುತ ಪಡಿಸಿದ್ದರು.
ಉಜ್ವಲ್ ವಿನ್ಯಾಸ, ಶ್ರೀಪಾದ ತೀರ್ಥಹಳ್ಳಿ ಹಾಗೂ ಹರ್ಷಿತಾ ಶಿರೂರು ಸಂಗೀತ ನೀಡಿದ್ದು, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಗಗನ್ ಶೆಟ್ಟಿ, ರೋನಿತ್ ರಾಯ್, ಕಾರ್ತಿಕ್ ಕುಮಾರ್, ಜೋಸಿತ್ ಪಿ. ಶೆಟ್ಟಿ, ಶ್ರೀಕಂಠ ರಾವ್, ಮನೀಶ್, ರೇವಣ್ಣ ಪಿಂಟೊ, ಲಿಖಿತಾ ಎ.ಪಿ., ವನ್ಯಶ್ರೀ ಎಚ್.ಸಿ ಅಭಿನಯಿಸಿದ್ದರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.