40% ಕಮೀಷನ್ ಪಡೆಯುವ ಭರದಲ್ಲಿ ಮಕ್ಕಳ ಹಸಿವನ್ನು ಮರೆತ ಸರಕಾರ – ವೆರೋನಿಕಾ ಕರ್ನೆಲಿಯೊ

Spread the love

40% ಕಮೀಷನ್ ಪಡೆಯುವ ಭರದಲ್ಲಿ ಮಕ್ಕಳ ಹಸಿವನ್ನು ಮರೆತ ಸರಕಾರ – ವೆರೋನಿಕಾ ಕರ್ನೆಲಿಯೊ

ಉಡುಪಿ: 40% ಕಮೀಷನ್ ಪಡೆಯುವ ಭರದಲ್ಲಿ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ತೊಗರಿ ಬೇಳೆ ಪೊರೈಸಲು ಮರೆತಿರುವ ರಾಜ್ಯ ಸರಕಾರದ ಧೋರಣೆ ನಿಜಕ್ಕೂ ದುರದೃಷ್ಠಕರವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಬರುವ ಮೊದಲು ಪ್ರತೀ ತಿಂಗಳು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ತೊಗರಿಬೇಳೆ ಪೂರೈಸಲಾಗುತ್ತಿತ್ತು. ಕೋವಿಡ್ ಬಳಿಕ ಮೂರು ತಿಂಗಳಿಗೊಮ್ಮೆ ತೊಗರಿಬೇಳೆಯನ್ನು ಒಮ್ಮೆಲೆ ಸರಬರಾಜು ಮಾಡಲಾಗುತ್ತಿತ್ತು. ಕಳೆದ ಸಪ್ಟೆಂಬರ್ ಮೊದಲ ವಾರದಲ್ಲಿ ಶಾಲೆಗಳಿಗೆ ತೊಗರಿಬೇಳೆ ಸರಬರಾಜು ಆಗಿತ್ತು ಬಳಿಕ ನವೆಂಬರ್ ವೇಳೆಗೆ ಪೊರೈಕೆ ಆಗಬೇಕಿತ್ತು ಆದರೆ ರಾಜ್ಯ ಮಟ್ಟದಲ್ಲಿ ಟೆಂಡರ್ ವಿಳಂಬವಾಗಿರುವುದರಿಂದ ಡಿಸೆಂಬರ್ ಬಂದರೂ ಸರಬರಾಜು ಆಗಿಲ್ಲ ಎನ್ನುವುದು ಮಾಧ್ಯಮಗಳು ವರದಿ ಮಾಡಿವೆ.

ಈ ಮೊದಲು ತಿಂಗಳಿಗೊಮ್ಮೆ ಸರಬರಾಜಾಗುತ್ತಿದ್ದ ತೊಗರಿಬೇಳೆ ಈ ಮೂರು ತಿಂಗಳಿಗೊಮ್ಮೆ ಸರಬರಾಜು ಆಗುತ್ತಿದ್ದು ಅದು ಕೂಡ ಕಳಪೆ ಗುಣಮಟ್ಟದ್ದಾಗಿದೆ ಎಂದು ಹೇಳಲಾಗುತ್ತಿದೆ. ಶಾಲೆಗೆ ಹೋಗುವ ಪುಟ್ಟ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಊಟ ನೀಡಲು ಸಾಧ್ಯವಾಗದ ಸರಕಾರ ಯಾವ ರೀತಿಯ ಆಡಳಿತ ನಡೆಸುತ್ತಿದೆ ಎನ್ನುವುದು ಪ್ರಶ್ನಾರ್ಥಕ ವಿಚಾರವಾಗಿದೆ.

ಸರಕಾರ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಊಟದ ವ್ಯವಸ್ಥೆ ಮಾಡುವ ಬದಲು ಕೇವಲ ಭ್ರಷ್ಠಾಚಾರದಲ್ಲಿ ಮುಳುಗಿದ್ದು, ಈಗಾಗಲೇ ಹಲವಾರು ಸರಕಾರಿ ನೌಕರರ ವೇತನ ಕೂಡ ನೀಡದೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ

ಶಾಲಾ ಶಿಕ್ಷಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಬಿಸಿಯೂಟ ನೌಕರರಿಗೆ, 108 ಅಂಬುಲೆನ್ಸ್ ಚಾಲಕರಿಗೆ ಕೂಡ ವೇತನ ನೀಡದೆ ಸತಾಯಿಸುತ್ತಿರುವ ಬಗ್ಗೆ ಕೇಳಿ ಬರುತ್ತಿದ್ದು ಸರಕಾರದ ವರ್ತನೆ ನಾಚಿಕೇಗೇಡು. ತಳ ಮಟ್ಟದ ನೌಕರರಿಗೆ ಸೂಕ್ತ ವೇತನ ನೀಡಲು ಸರಕಾರ ಪರದಾಡುತ್ತಿದ್ದು ಕೇವಲ ತನ್ನ ಕಿಸೆ ತುಂಬಿಸುಕೊಳ್ಳುವುದರಲ್ಲೇ ಮಗ್ನವಾಗಿದೆ ಎನ್ನುವುದು ಎದ್ದು ಕಾಣುತ್ತಿದೆ. ಇನ್ನಾದರೂ ಸರಕಾರ ಎಚ್ಚೆತ್ತು ಮಕ್ಕಳ ಬಿಸಿಯೂಟದ ಸಮಸ್ಯೆಯನ್ನು ಪರಿಹಾರ ಮಾಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love