500 ಕೋಟಿ ರೂ. ಮೂಲ ಬಂಡವಾಳದೊಂದಿಗೆ ಮಹಿಳಾ ಬ್ಯಾಂಕ್ ಸ್ಥಾಪನೆ: ಸಚಿವ ಸುನೀಲ್ ಕುಮಾರ್

Spread the love

500 ಕೋಟಿ ರೂ. ಮೂಲ ಬಂಡವಾಳದೊಂದಿಗೆ ಮಹಿಳಾ ಬ್ಯಾಂಕ್ ಸ್ಥಾಪನೆ: ಸಚಿವ ಸುನೀಲ್ ಕುಮಾರ್

ಉಡುಪಿ: ರಾಜ್ಯ ಸರಕಾರ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ರೂ. ಮೂಲ ಬಂಡವಾಳದೊಂದಿಗೆ ಮಹಿಳಾ ಬ್ಯಾಂಕ್‌ ಸ್ಥಾಪನೆ ಮಾಡುವುದಾಗಿ ಘೋಷಿಸಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮಣಿಪಾಲ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ 111ನೆ ನೂತನ ಮಣಿಪಾಲ ಶಾಖೆ ಹಾಗೂ ಮಣಿಪಾಲ ಎಂಐಟಿ ಕಾಲೇಜು ಎದುರಿನ ಮೈದಾನದಲ್ಲಿ ನಡೆದ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮನೆಗೆ ಮಾತ್ರ ಸೀಮಿತ ಎಂಬ ಕಾಲಘಟ್ಟದಿಂದ ಮಹಿಳೆಯರು ಇಂದು ಹೊರ ಬಂದು, ಆರ್ಥಿಕ ಚಟುವಟಿಕೆಗಳ ನೇತೃತ್ವ ವಹಿಸುತ್ತಿದ್ದಾರೆ. ಮಹಿಳೆಯರು ಇಂದು ದೊಡ್ಡ ಮಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿದ್ದಾರೆ. ಆರ್ಥಿಕ ವ್ಯವಹಾರದಲ್ಲಿ ಪುರುಷರಿಗಿಂತ ಅತ್ಯಂತ ಶಿಸ್ತು, ತಾಳ್ಮೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿ ಕೊಂಡಿದ್ದಾರೆ. ಅದನ್ನು ಸ್ವಸಹಾಯ ಸಂಘಗಳಲ್ಲಿ ಸಾಲವನ್ನು ಮರುಪಾವತಿ ಮಾಡುವ ಮೂಲಕ ತೋರಿಸಿಕೊಟ್ಟಿ ದ್ದಾರೆ. ಮಹಿಳಾ ಅಭಿವೃದ್ಧಿಯಲ್ಲಿ ಸ್ವಸಹಾಯ ಸಂಘಗಳ ಪಾತ್ರ ಮಹತ್ವದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಮಾತನಾಡಿ, ದೇಶದಲ್ಲಿ ರೈತರು ಸಾಲ ಮರು ಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡದ ಜಿಲ್ಲೆಗಳೆಂದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮಾತ್ರ. ಕೊರೋನ ಸಂಪೂರ್ಣ ನಿರ್ಮೂಲನೆಯಾದರೆ ಮಹಿಳೆಯರಿಗೆ ಹೊಸ ಸೀರೆ ಕೊಡುವ ಭರವಸೆಯನ್ನು ಈ ಬಾರಿ ಪೂರೈಸಲಾಗಿದೆ ಎಂದರು.

ಮಣಿಪಾಲ ನೂತನ ಶಾಖೆಯಲ್ಲಿ 70 ನವೋದಯ ಗುಂಪುಗಳು ಹಾಗೂ 1000 ಉಳಿತಾಯ ಖಾತೆಯನ್ನು ತೆರೆಯಲಾಗಿದೆ. ನವೋದಯ ಗುಂಪಿನ ಸದಸ್ಯರ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಿ ಉನ್ನತ ಸ್ಥಾನಕ್ಕೆ ಏರಬೇಕು. ಗುಂಪಿನಲ್ಲಿ ಶೇ.99.9 ರಷ್ಟು ಸಾಲ ಮರುಪಾವತಿಯಾಗುತ್ತಿದೆ. ಮಹಿಳೆಯರ ಪ್ರಾಮಾಣಿಕತೆಯನ್ನು ನಂಬಿ ಗುಂಪಿನ ಸಾಲವನ್ನು 10ರಿಂದ 20ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ನವೋದಯ ನಿಷ್ಠೆ ಪ್ರಾಮಾಣಿಕತೆ ಫಲವಾಗಿ ಗುಂಪನ್ನು ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಗದಗ, ದಾವಣಗೆರೆ, ಚಿಕ್ಕಮಗಳೂರಿಗೆ ವಿಸ್ತರಿಸಲಾಗಿದೆ ಎಂದರು.

ಉಡುಪಿ ಮೊಬೈಲ್ ಬ್ಯಾಂಕ್‌ನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಬೆಳ್ಳಿ ಪ್ರಕಾಶ್ ಉದ್ಘಾಟಿಸಿದರು. ಉಡುಪಿ ಶಾಸಕ ರಘುಪತಿ ಭಟ್ ಶಾಖೆಯ ಭದ್ರತಾ ಕೋಶದ ಉದ್ಘಾಟನೆ ಹಾಗೂ ಪ್ರಥಮ ಠೇವಣಿ ಪತ್ರ ವಿತರಣೆ ಮಾಡಿದರು. ಉದ್ಯಮಿ ಡಾ.ಜಿ.ಶಂಕರ್, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಮುಖ್ಯಕಾರ್ಯ ನಿರ್ವಹಣಾ ಧಿಕಾರಿ ಸಿ.ಎನ್.ದೇವರಾಜ್ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಮಣಿಪಾಲ ದಿ.ಕೆನರಾ ಲ್ಯಾಂಡ್ ಇನ್‌ವೆಸ್ಟ್‌ಮೆಂಟ್ಸ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕ ಟಿ.ಅಶೋಕ್ ಪೈ ಹಾಗೂ ಮಣಿಪಾಲ ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ನವೋದಯ ಜಂಟಿ ಭಾದ್ಯತಾ ಗುಂಪುಗಳಿಗೆ ಸಾಲ ವಿತರಣೆ, ಚೈತನ್ಯ ವಿಮಾ ಚೆಕ್ ವಿತರಣೆ, ಹೊಸ ಸ್ವಸಹಾಯ ಗುಂಪುಗಳ ಉದ್ಘಾಟನೆಯನ್ನು ನೆರವೇರಿಸ ಲಾಯಿತು. ಇದೇ ಸಂದರ್ಭದಲ್ಲಿ ಕೊರೋನದಲ್ಲಿ ಮೃತಪಟ್ಟ 59 ರೈತರಿಗೆ ತಲಾ 1 ಲಕ್ಷ ರೂಪಾಯಿ ಧನಸಹಾಯ ಹಸ್ತಾಂತರ ಮಾಡಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಬಾರ್ಡ್ ಡಿಡಿಎಂ ಸಂಗೀತಾ ಕರ್ತಾ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ ಹೆರ್ಗ, ನಗರಸಭೆ ಅಧ್ಯಕ್ಷ ಸುಮಿತ್ರಾ ಆರ್.ನಾಯಕ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಕಾಪು ದಿವಾಕರ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಸಿಇಒ ರವೀಂದ್ರ ಬಿ., ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಟಿ.ಜಿ.ರಾಜಾರಾಮ್ ಭಟ್, ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಂ.ಮಹೇಶ್ ಹೆಗ್ಡೆ, ಕೆ.ಹರಿಶ್ಚಂದ್ರ, ಜೈರಾಜ್ ಬಿ.ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಬಿ. ಜಯರಾಮ್ ರೈ, ಮಹಾಪ್ರಬಂಧಕ ಗೋಪಿನಾಥ್ ಭಟ್, ನವೋದಯ ಟ್ರಸ್ಟ್ ಸಿಇಒ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love