56 ಇಂಚು ಸುತ್ತಳತೆಯ ಮೋದಿಯ ಎದೆಗೆ ಮಣಿಪುರದ ಘಾಸಿ ಚುಚ್ಚಲು 79 ದಿನ ಬೇಕಾಯಿತೇ? – ಅನಿತಾ ಡಿಸೋಜಾ

Spread the love

56 ಇಂಚು ಸುತ್ತಳತೆಯ ಮೋದಿಯ ಎದೆಗೆ ಮಣಿಪುರದ ಘಾಸಿ ಚುಚ್ಚಲು 79 ದಿನ ಬೇಕಾಯಿತೇ? – ಅನಿತಾ ಡಿಸೋಜಾ

ಕಾರ್ಕಳ: ಮಣಿಪುರದಲ್ಲಿ ಕುಕಿ-ಬೋ ಸಮುದಾಯದ ಮಹಿಳೆಯರಿಬ್ಬರನ್ನು ನಗ್ನಗೊಳಿಸಿ ಮೆರವಣಿಗೆ ನಡೆಸಿ ಅತ್ಯಾಚಾರ ಮಾಡಿರುವ ಕುಕೃತ್ಯಕ್ಕೆ ಸುಪ್ರೀಂಕೋರ್ಟ್ ಹಾಕಿರುವ ಛೀಮಾರಿ ಕೇಂದ್ರದ ನಿಷ್ಕ್ರಿಯತೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಕೃತ್ಯಗಳು ನಡೆಯಲು ಅಲ್ಲಿನ ರಾಜ್ಯ ಸರಕಾರದ ಪಾಲೆಷ್ಟಿದೆಯೋ, ಕೇಂದ್ರದ ಪಾಲು ಅಷ್ಟೇ ಇದೆ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುಜರಾತಿನ ವಡೋದರದ ಬೀದಿಯಲ್ಲಿ ಅಲ್ಪಸಂಖ್ಯಾತ ಗರ್ಭಿಣಿ ಮಹಿಳೆಯ ಹೊಟ್ಟೆಗೆ ತಿವಿದು, ಮಗುವನ್ನು ಹೊರ ತೆಗೆದು ಅದನ್ನು ತ್ರಿಶೂಲದಿಂದ ಚುಚ್ಚಿ ಮಗುವನ್ನು ಮೆರವಣಿಗೆ ಮಾಡಿದಾಗ ಇದೆ 56 ಇಂಚಿನ ಎದೆ ಮೌನವಹಿಸಿತ್ತು. ಈಗ ಮಣಿಪುರದ ಬೀದಿಯಲ್ಲಿ ಮಹಿಳೆಯರ ನಗ್ನ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸೆಯುವಾಗಲೂ 56 ಇಂಚಿನ ಎದೆ ಮತ್ತದೇ ಮೌನ. ಬಿಚ್ಚಿ ಮಾತನಾಡಿ ಕಣ್ಣೀರು ಸುರಿಸಲು 79 ದಿನ ಬೇಕಾಗಲು ಈ ಕೃತ್ಯವ‌ನ್ನು ಕಂಡು ಜಗತ್ತೇ ಕ್ಯಾಕರಿಸಿ ಉಗಿಯಲು ಪ್ರಾರಂಭಿಸಿಬೇಕಾಯಿತು.

ಈ ಘಟನೆ ವಿಶ್ವದ ಮುಂದೆ ನಾವು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ನಮ್ಮ ದೇಶ ಸಾಕ್ಷಿಯಾಗಿದ್ದು ಈ ನೆಲದ ದುರಂತ. ಬಿಜೆಪಿಯಲ್ಲಿರುವ ಮನಸುಗಳು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದರ ಫಲವಿದು ಎಂದು ಬಿಜೆಪಿ ವಿರುದ್ಧ ವಾಗ್ದಾನ ನಡೆಸಿದ್ದಾರೆ.

ಅಲ್ಲಿನ ಪೊಲೀಸ್ ಅಧಿಕಾರಿಗಳೇ ಹೇಳುವ ಪ್ರಕಾರ ಈ ಘಟನೆ ನಡೆದಿರುವುದು ಮೇ ಮೊದಲ ವಾರದಲ್ಲಿ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿ FIR ಆಗಿದೆಯಂತೆ, ಘಟನೆ ನಡೆದು ಎರಡು ತಿಂಗಳಾದರೂ ಅಪರಾಧಿಗಳ ಬಂಧನವಾಗಿಲ್ಲ. ಇದೀಗ ವಿಡಿಯೋ ವೈರಲ್ ಆಗಿರುವುದರಿಂದ ಮುಜುಗರ ತಪ್ಪಿಸಲು, ಕುಣಿಕೆ ಎಲ್ಲಿ ತಮ್ಮ ಕೊರಳ ಸುತ್ತ ಬೀಳುತ್ತೆ ಎನ್ನುವ ಭಯದಿಂದ ತನಿಖೆಯ ಬಗ್ಗೆ ಮಾತನಾಡುತ್ತಿದ್ದಾರೆ.

ಮೋದಿ ಮಣಿಪುರದ ಗಲಭೆಗಳ ಬಗ್ಗೆ ಮಾತನಾಡಬೇಕಾದರೆ ಒಂದು ಹೇಯ ಕೃತ್ಯದ ವಿಡಿಯೋ ಹೊರಬರಬೇಕಾಯಿತು. ಕಳೆದ ಮೂರು ತಿಂಗಳ ಗಲಭೆಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ, ಅದೆಷ್ಟೋ ಮಂದಿ ಗಾಯಗೊಂಡಿದ್ದಾರೆ, ಇನ್ನೆಷ್ಟೋ ಜನರು ನಾಪತ್ತೆಯಾಗಿದ್ದಾರೆ.

ಸುಮಾರು 60000- 70000 ಮಂದಿ ನಿರಾಶ್ರಿತರ ಕ್ಯಾಂಪ್‍ಗಳಲ್ಲಿದ್ದಾರೆ. ಯಾಕೆಂದರೆ ಅವರ ಮನೆ, ಹಳ್ಳಿಗಳೇ ಬೆಂಕಿಗಾಹುತಿಯಾಗಿ ನಾಶವಾಗಿವೆ. ಒಂದೆರಡಲ್ಲ 300ಕ್ಕಿಂತಲೂ ಹೆಚ್ಚು ಚರ್ಚುಗಳ ಮೇಲೆ ದಾಳಿ ನಡೆದಿದೆ.
ಇಷ್ಟೆಲ್ಲಾ ಆದರೂ ಮೋದಿಯವರಿಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾತಾನಾಡಬೇಕು, ಅಲ್ಲಿನ ಜನರಿಗೆ ಧೈರ್ಯ ತುಂಬಬೇಕು ಎಂದು ಅನಿಸಲೇ ಇಲ್ಲ. ಒಂದು ಟ್ವೀಟ್ ಕೂಡಾ ಹೊರಬರಲಿಲ್ಲ.

ಇದೀಗ ಈ ವಿಡಿಯೋ ಹೊರಬರುತ್ತಲೇ, ಇನ್ನೇನು ಈ ವಿಡಿಯೋ ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ಬಂದು ಪ್ರಪಂಚದೆದುರು ಮಾನ ಹರಾಜಾಗುತ್ತದೆ ಎನ್ನುವಾಗ ನಾವು ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆಡಳಿತ ವ್ಯವಸ್ಥೆ ಕೈಯಲ್ಲಿದ್ದು ಪೊಲೀಸ್, ಸೇನೆಯ ಸಹಾಯವಿದ್ದು ಒಂದು ಗಲಭೆಯನ್ನು ಒಂದೆರಡು ದಿನಗಳಲ್ಲಿ ನಿಯಂತ್ರಿಸಲಾಗದ ಮೋದಿ ಅಸಮರ್ಥರಾಗಿದ್ದಾರೆ.

ಪ್ರಧಾನಿ ಮೋದಿ ಮತ್ತು ಮಣಿಪುರ ಮುಖ್ಯಮಂತ್ರಿ ತಮ್ಮ ಅಸಮರ್ಥತೆ ಮನಗಂಡು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮತ್ತು ದೇಶದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯದಲ್ಲಿನ ವ್ಯಭಿಚಾರ ಭೀಕರತೆ ಶಮನ ಮಾಡಲು ಸಹಕಾರ ನೀಡಬೇಕೆಂದು ಅನಿತಾ ಡಿಸೋಜ ಕರೆ ನೀಡಿದ್ದಾರೆ.


Spread the love