7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ
ಮಂಗಳೂರು: ಕಳೆದ ಸುಮಾರು ಏಳು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ನನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತನನ್ನು ಉಮ್ಮರ್ ನವಾಫ್ (ತಂದೆ: ಅಬ್ದುಲ್ ಖಾದರ್), ಮೂಲತಃ ಉಳ್ಳಾಲ ತಾಲೂಕಿನ ಮಾರ್ಗತಲೆ ನಿವಾಸಿಯಾಗಿದ್ದು, ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪಾವೂರು ಅಂಚೆ ವ್ಯಾಪ್ತಿಯ ಕುಂಡಪ್ಪು ಗೇರುಕಟ್ಟೆಯ ನಾಜಿಯಾ ಮಂಜೀಲ್ನಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ 13ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ವಿವಿಧ ನ್ಯಾಯಾಲಯಗಳಿಂದ 30ಕ್ಕೂ ಅಧಿಕ ವಾರಂಟ್ಗಳು ಜಾರಿಯಾಗಿದ್ದವು.
ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ವಿಶೇಷ ಕರ್ತವ್ಯ ತಂಡವು ಆಗಸ್ಟ್ 2, 2026ರಂದು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಪೊಲೀಸರ ಮಾಹಿತಿಯಂತೆ, ಉಳ್ಳಾಲ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 206/2012, 27/2017 ಹಾಗೂ 183/2017 ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ಆರೋಪಿ ವಿರುದ್ಧ ಪ್ರೋಕ್ಲಮೇಶನ್ (ಘೋಷಣೆ) ಜಾರಿಯಾಗಿತ್ತು. ಅಲ್ಲದೆ, ಅಪರಾಧ ಸಂಖ್ಯೆ 276/2015 ಪ್ರಕರಣದಲ್ಲಿ ನ್ಯಾಯಾಲಯವು ಎಲ್.ಪಿ.ಸಿ. (Long Pending Case) ಎಂದು ದಾಖಲಿಸಿತ್ತು.
