ಮಂಗಳೂರು ರೈಲು ನಿಲ್ದಾಣದಲ್ಲಿ ಪಶ್ಚಿಮ ಬಂಗಾಳದ 9 ವರ್ಷದ ಬಾಲಕನ ರಕ್ಷಣೆ
ಮಂಗಳೂರು: ಮನೆಯಿಂದ ಓಡಿಬಂದು ರೈಲಿನಲ್ಲಿ ಕರಾವಳಿ ತಲುಪಿದ್ದ ಪಶ್ಚಿಮ ಬಂಗಾಳ ಮೂಲದ 9 ವರ್ಷದ ಬಾಲಕನನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದೆ ಎಂದು ಪ್ರಕಟಣೆ ತಿಳಿಸಿದೆ.
‘ಆಪರೇಷನ್ ನನ್ಹೆ ಫರಿಶ್ತೆ’ (Operation Nanhe Farishte) ಅಭಿಯಾನದಡಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಈ ರಕ್ಷಣಾ ಕಾರ್ಯ ನಡೆದಿದೆ.
ದಿನಾಂಕ 10-10-2026ರಂದು ಬೆಳಗ್ಗೆ ಸುಮಾರು 9:49ರ ವೇಳೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಿಸಿಟಿವಿ ಕಣ್ಗಾವಲು ನಡೆಸುತ್ತಿದ್ದ ಆರ್ಪಿಎಫ್ ಸಿಬ್ಬಂದಿ ಕುಮಾರಿ ವಿನಿಶಾ ಅವರು, ನಿಲ್ದಾಣದ ಆವರಣದಲ್ಲಿ ಅನುಮಾನಾಸ್ಪದ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಒಬ್ಬನೇ ತಿರುಗಾಡುತ್ತಿದ್ದ 9 ವರ್ಷದ ಬಾಲಕನನ್ನು ಗಮನಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಆರ್ಪಿಎಫ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬಾಲಕನನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು.
ಆರ್ಪಿಎಫ್ ಅಧಿಕಾರಿಗಳು ಬಾಲಕನನ್ನು ವಿಚಾರಣೆಗೊಳಪಡಿಸಿದಾಗ, ಆತ ಪಶ್ಚಿಮ ಬಂಗಾಳ ಮೂಲದವನೆಂದು ತಿಳಿದುಬಂದಿದೆ. ಮನೆಯಲ್ಲಿ ಯಾರಿಗೂ ತಿಳಿಸದೆ ತಪ್ಪಿಸಿಕೊಂಡು ಬಂದಿದ್ದ ಬಾಲಕ, ರೈಲು ಸಂಖ್ಯೆ 22851 ಸಾಂತ್ರಾಗಾಚಿ ಎಕ್ಸ್ಪ್ರೆಸ್ (Santragachi Express) ಮೂಲಕ ಮಂಗಳೂರು ಸೆಂಟ್ರಲ್ ತಲುಪಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ರಕ್ಷಿಸಲ್ಪಟ್ಟ ಬಾಲಕನಿಗೆ ಅಗತ್ಯ ಉಪಚಾರಗಳನ್ನು ನೀಡಿದ ಬಳಿಕ, ನಿಯಮಾನುಸಾರ ಆತನ ಮುಂದಿನ ಪೋಷಣೆ, ಸಂರಕ್ಷಣೆ ಮತ್ತು ಕುಟುಂಬದವರೊಂದಿಗೆ ಪುನರ್ಮಿಲನದ ಪ್ರಕ್ರಿಯೆಗಾಗಿ ಮಂಗಳೂರಿನ ಮಕ್ಕಳ ಕಲ್ಯಾಣ ಸಮಿತಿಗೆ (CWC) ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ನಿಲ್ದಾಣಗಳಲ್ಲಿ ಕಳೆದುಹೋದ ಅಥವಾ ಮನೆಬಿಟ್ಟು ಬರುವ ಅಸಹಾಯಕ ಮಕ್ಕಳ ರಕ್ಷಣೆಗಾಗಿ ಭಾರತೀಯ ರೈಲ್ವೆ ರೂಪಿಸಿರುವ ‘ನನ್ಹೆ ಫರಿಶ್ತೆ’ ಯೋಜನೆಯಡಿ ಕರ್ತವ್ಯ ನಿರ್ವಹಿಸಿದ ಆರ್ಪಿಎಫ್ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಯನ್ನು ರೈಲ್ವೆ ಆಡಳಿತ ಶ್ಲಾಘಿಸಿದೆ.
