ಉಡುಪಿಯಲ್ಲಿ ನ.29ರಂದು ಬೃಹತ್ ಮಹಾಧನ್ವಂತರಿ ಮಹಾಯಾಗ
9 ಸಾವಿರಕ್ಕೂ ಅಧಿಕ ಭಕ್ತರಿಂದ ನೋಂದಣಿ; 15 ಸಾವಿರ ಮಂದಿಗೆ ಮಹಾಪ್ರಸಾದದ ವ್ಯವಸ್ಥೆ – ಯಾಗದ ಯಶಸ್ಸಿಗೆ ಸಂಪೂರ್ಣ ಸಹಕಾರ: ಯಶ್ಪಾಲ್ ಸುವರ್ಣ
ಉಡುಪಿ: ಸಮಸ್ತ ಸಮಾಜದ ಆರೋಗ್ಯ, ಕ್ಷೇಮ, ರಾಷ್ಟ್ರದ ಸುರಕ್ಷತೆ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ನವೆಂಬರ್ 29ರಂದು ಉಡುಪಿಯ ಕುಂಜಿಬೆಟ್ಟಿನ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಬೃಹತ್ ಶ್ರೀ ಮಹಾಧನ್ವಂತರಿ ಮಹಾಯಾಗ ಆಯೋಜಿಸಲಾಗಿದೆ. ಈಗಾಗಲೇ 9 ಸಾವಿರಕ್ಕೂ ಅಧಿಕ ಭಕ್ತರು ಯಾಗದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದು, ಸುಮಾರು 15 ಸಾವಿರ ಮಂದಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಯಾಗದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ನಗರದ ಕಿದಿಯೂರು ಹೋಟೆಲ್ನ ಶೇಷಶಯನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಯಾಗದ ಆಯೋಜನೆಯ ಕುರಿತು ಮಾಹಿತಿ ನೀಡಿದ ಸ್ವಾಗತ ಸಮಿತಿ ಸದಸ್ಯ ಗುರುಪ್ರಸಾದ್ ಗೌಡ, ಈಗಾಗಲೇ 9 ಸಾವಿರಕ್ಕೂ ಅಧಿಕ ಮಂದಿ ಉಚಿತವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 15 ಸಾವಿರ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದೇ ಶುಲ್ಕವಿಲ್ಲದೆ ಸಾರ್ವಜನಿಕರು ನೋಂದಣಿ ಮಾಡಿಕೊಂಡು ಭಾಗವಹಿಸಬಹುದು. ನವೆಂಬರ್ 29ರಂದು ಮಧ್ಯಾಹ್ನ 3 ಗಂಟೆಗೆ ದೀಪಪ್ರಜ್ವಲನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ 7ರವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದರು.
ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ದೀಪಪ್ರಜ್ವಲನೆ ಮಾಡಲಿದ್ದಾರೆ. ಉಡುಪಿಯ ಅಷ್ಟಮಠಗಳ ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ವಿವಿಧ ದೇವಸ್ಥಾನಗಳು, ಸಂಘ-ಸಂಸ್ಥೆಗಳು, ಮಹಿಳಾ ಮತ್ತು ಭಜನಾ ಮಂಡಳಿಗಳು, ವೈದ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉದ್ಯಮಿಗಳು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಯಾಗದ ಅಂಗವಾಗಿ ಧರ್ಮಗ್ರಂಥಗಳು, ಸಾತ್ವಿಕ ಉತ್ಪನ್ನಗಳು ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಪರಿಚಯಿಸುವ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗುವುದು ಎಂದು ತಿಳಿಸಿದರು.
ಯಾಗದ ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು ಮಾತನಾಡಿ, ಯಾಗದ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಲಾಗಿದ್ದು, ಸಾವಿರಾರು ಮನೆಗಳಿಗೆ ಆಮಂತ್ರಣ ಪತ್ರಿಕೆ ತಲುಪಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ನಡೆಸಲಾಗುತ್ತಿದೆ ಎಂದರು.
ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಬೃಹತ್ ಜರ್ಮನ್ ಹ್ಯಾಂಗರ್ ಮಾದರಿಯ ಪೆಂಡಾಲ್ ನಿರ್ಮಾಣ, ಯಾಗಮಂಟಪ, ವೇದಿಕೆ, ಧಾರ್ಮಿಕ ಪ್ರದರ್ಶನ ಮಳಿಗೆಗಳು ಹಾಗೂ ಮಹಾಪ್ರಸಾದದ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ವಾಹನ ನಿಲುಗಡೆ, ಪ್ರವೇಶ ಮತ್ತು ನಿರ್ಗಮನ ಮಾರ್ಗ, ಕುಡಿಯುವ ನೀರು, ಸ್ವಚ್ಛತೆ, ಆಸನ ವ್ಯವಸ್ಥೆ ಹಾಗೂ ಸ್ವಯಂಸೇವಕರ ನಿಯೋಜನೆಗೂ ಯೋಜನೆ ರೂಪಿಸಲಾಗಿದೆ. ನವೆಂಬರ್ 26ರೊಳಗೆ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಉಡುಪಿಯಲ್ಲಿ ನಡೆಯಲಿರುವ ಮಹಾಯಾಗದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ರಮೇಶ ಶಿಂದೆ, ಸನಾತನ ಸಂಸ್ಥೆಯ ಧರ್ಮ ಪ್ರಚಾರಕ ರಮಾನಂದ ಗೌಡ, ಸಮಿತಿಯ ಪ್ರಮುಖರಾದ ಆರ್.ಕೆ. ಮೆಂಡನ್, ಕುಯಿಲಾಡಿ ಸುರೇಶ್ ನಾಯಕ್, ಶೋಭಾ ಕಾಮತ್ ಉಪಸ್ಥಿತರಿದ್ದರು.
