ಅಜಿತ್ ಕೊಡವೂರು ಹೇಳಿಕೆ ಸಮಾಜದಲ್ಲಿ ವಿಷಬೀಜ ಬಿತ್ತುವ ಪ್ರಯತ್ನ : ಸುದೇಶ್ ಶೆಟ್ಟಿ
ಉಡುಪಿ: ಅಜಿತ್ ಕೊಡವೂರು ಅವರು ನೀಡಿರುವ ಹೇಳಿಕೆ ಸಂಪೂರ್ಣವಾಗಿ ಅಸಂಬದ್ಧ, ಅಜ್ಞಾನಪೂರ್ಣ ಮತ್ತು ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನವಾಗಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಮೊದಲು ಅಜಿತ್ ಕೊಡವೂರು ಅವರು ತಮ್ಮ ಮಟ್ಟ ತಿಳಿದು ಮಾತನಾಡುವುದು ಒಳಿತು. ಯಾರನ್ನು ಬಹಿಷ್ಕರಿಸಬೇಕು, ಯಾರನ್ನು ಆಹ್ವಾನಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಯಾರೂ ಇವರಿಗೆ ನೀಡಿಲ್ಲ. ಉಡುಪಿ ಜಿಲ್ಲೆಯ ಹಿಂದೂ ಸಮಾಜ ಅವರ ವೈಯಕ್ತಿಕ ಆಸ್ತಿಯಲ್ಲ.
ಪ್ರಸಾದ್ ರಾಜ್ ಕಾಂಚನ್ ಅವರ ವಿರುದ್ಧ ಬೆದರಿಕೆ ಭಾಷೆ ಬಳಸುವುದು ನಿಮ್ಮ ಅಸಹಿಷ್ಣುತೆಯ ಸ್ಪಷ್ಟ ಉದಾಹರಣೆಯಾಗಿದ್ದು ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ಅಪರಾಧವಲ್ಲ — ಆದರೆ ಪ್ರಶ್ನೆ ಕೇಳಿದವರನ್ನು ಬೆದರಿಸುವುದು ಖಂಡಿತವಾಗಿ ಅಸಭ್ಯ ಮತ್ತು ಅಪಾಯಕಾರಿ ರಾಜಕೀಯ.
ಹಿಂದೂ ಧರ್ಮದ ಹೆಸರಿನಲ್ಲಿ ದೌರ್ಜನ್ಯ, ಬೆದರಿಕೆ ಮತ್ತು ಬಹಿಷ್ಕಾರದ ರಾಜಕೀಯ ಮಾಡುತ್ತಿರುವವರು ನಿಜವಾದ ಧರ್ಮಭಕ್ತರಲ್ಲ — ಅವರು ಕೇವಲ ರಾಜಕೀಯ ಏಜೆಂಡಾ ಹೊಂದಿರುವವರು. ಅಜಿತ್ ಕೊಡವೂರು ಅವರು ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸುವ ರಾಜಕೀಯವನ್ನು ನಿಲ್ಲಿಸಬೇಕು.
ತಾಕತ್ತು ಇದ್ದರೆ, ಬಡವರಿಗೆ ಉಚಿತ ಶಿಕ್ಷಣ, ಉದ್ಯೋಗ ಸೃಷ್ಟಿ, ಆರೋಗ್ಯ ಸೇವೆಗಳ ಬಗ್ಗೆ ಮಾತನಾಡಿ. ಅದು ಬಿಟ್ಟು ವೈಯಕ್ತಿಕ ದಾಳಿ ಮತ್ತು ಬೆದರಿಕೆಗಳಿಗೆ ಇಳಿಯುವುದು ನಿಮ್ಮ ದೌರ್ಬಲ್ಯವನ್ನು ತೋರಿಸುತ್ತದೆ.
ಪ್ರಸಾದ್ ಕಾಂಚನ್ ಅವರ ಮೇಲೆ ಕೆಟ್ಟ ಪ್ರಚಾರ ಮಾಡಿ ಹಿಂದೂ ಸಮಾಜವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದರೆ, ಉಡುಪಿ ಜನತೆ ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ.
ದ್ವೇಷ, ಬೆದರಿಕೆ ಮತ್ತು ಧರ್ಮದ ದುರುಪಯೋಗಕ್ಕೆ ನಾವು ಮಣಿಯುವುದಿಲ್ಲ. ಯಾರೇ ಆಗಿರಲಿ, ಸಮಾಜವನ್ನು ವಿಭಜಿಸುವ ಪ್ರಯತ್ನಕ್ಕೆ ಕಠಿಣ ಪ್ರತಿಕ್ರಿಯೆ ನೀಡುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
