ಪುತ್ತೂರು ಪ್ರೆಸ್ ಕ್ಲಬ್ ಬಳಿ ಗಲಾಟೆ: 9 ಮಂದಿ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಪತ್ರಿಕಾಗೋಷ್ಠಿ ನಡೆಸಲು ಪುತ್ತೂರು ಪ್ರೆಸ್ ಕ್ಲಬ್ಗೆ ಬಂದಿದ್ದ ರಾಜಕೀಯ ಪಕ್ಷವೊಂದರ ಕಾರ್ಯಕರ್ತ ಅಬ್ದುಲ್ ಹಕೀಂ ಕೂರ್ನಡ್ಕ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಒಂಬತ್ತು ಮಂದಿ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ತಮ್ಮ ವಿರುದ್ಧ ಮಾಡಲಾಗಿರುವ ಕೆಲವು ಆರೋಪಗಳಿಗೆ ಸ್ಪಷ್ಟನೆ ನೀಡುವ ಸಲುವಾಗಿ ಸೆ.1ರಂದು ಮಧ್ಯಾಹ್ನ ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಹಕೀಂ ಆಗಮಿಸಿದ್ದರು. ಈ ವೇಳೆ ಉದಯ ಪಾಟಾಳಿ, ಜುನೈದ್ ಬಿಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಹಕೀಂ ಬೋಳ್ವಾರು, ಮೋನು ಬಪ್ಪಳಿಗೆ, ನಾಶಿರ್ ಕೊಲ್ಪೆ, ಪ್ರವೀಣ್ ಆಚಾರ್ಯ ಸೇರಿದಂತೆ ಇತರರು ತಮ್ಮನ್ನು ತಳ್ಳಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಪ್ರೆಸ್ ಕ್ಲಬ್ನೊಳಗೆ ತೆರಳಿದ್ದ ತಮ್ಮನ್ನು ಹೊರಗೆ ಬಾರದಂತೆ ಆರೋಪಿಗಳು ಅಕ್ರಮವಾಗಿ ತಡೆದಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ತಳ್ಳಾಟದಿಂದ ನೋವುಂಟಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅಬ್ದುಲ್ ಹಕೀಂ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 105/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 127(2), 351(1), 351(2), 351(3), 352, 115 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
